ಉಪ್ಪಿನಂಗಡಿ: ಒಂಟಿ ಸಲಗ ದಾಳಿ-ವ್ಯಕ್ತಿ ಸಾವು

ಉಪ್ಪಿನಂಗಡಿ: ಒಂಟಿ ಸಲಗ ದಾಳಿ-ವ್ಯಕ್ತಿ ಸಾವು

ಉಪ್ಪಿನಂಗಡಿ: ತಂದೆ ಮತ್ತು ಮಗ ಮೀನು ಹಿಡಿಯಲೆಂದ ಶನಿವಾರ ಸಂಜೆ ಗುಂಡ್ಯ ಹೊಳೆಗೆ ತೆರಳಿದ ಸಂದರ್ಭದಲ್ಲಿ ಅವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿದ್ದು, ತಂದೆ ಮೃತಪಟ್ಟು, ಪುತ್ರ ಗಾಯಗೊಂಡ ಘಟನೆ ನಡೆದಿದೆ.

ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿ ತಿಮ್ಮಪ್ಪ (45) ಮೃತಪಟ್ಟವರು. ಅವರ ಪುತ್ರ ಶರಣ್ (18) ಅಪಾಯದಿಂದ ಪಾರಾಗಿದ್ದು, ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಶರಣ್ ಮೀನು ಹಿಡಿಯಲು ಗುಂಡ್ಯ ಹೊಳೆ ಬದಿಗೆ ಹೋಗಿದ್ದ ವೇಳೆ ಹೊಳೆಯ ಕಡೆಗೆ ಬಂದ ಒಂಟಿ ಸಲಗ ಶರಣ್ ಮೇಲೆ ದಾಳಿಗೆ ಮುಂದಾಯಿತು. ಈ ವೇಳೆ ಮಗನ ರಕ್ಷಣೆಗೆ ಓಡಿ ಬಂದ ತಿಮ್ಮಪ್ಪ ಅವರನ್ನು ಆನೆ ಕೆಡವಿ ಕಾಲಿನಿಂದ ತುಳಿದು ಹಾಕಿತು. ಇದರಿಂದ ಗಂಭೀರವಾಗಿ ಗಾಯಗೊಂಡ ತಿಮ್ಮಪ್ಪ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದರು ಎಂದು ವೈದ್ಯರು ತಿಳಿಸಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.