ಮಂಗಳೂರು: ಬೀಚ್ ನಲ್ಲಿ ಆರನೇ ಕ್ಲಾಸ್ ವಿದ್ಯಾರ್ಥಿಗೆ ಲಾಠಿಯೇಟು ನೀಡಿದ ಪೊಲೀಸರು

ಪೊಲೀಸರ ದುರ್ವರ್ತನೆ: ಸ್ಥಳೀಯರ ಆಕ್ರೋಶ.!

ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಬ್ಲಾಕ್ ಆಗಿದ್ದ ಕಾರಣಕ್ಕೆ ಅಲ್ಲಿ ಸೇರಿದ್ದ ಯುವಕರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ದುರ್ವರ್ತನೆ ತೋರಿದ ಘಟನೆ ನಡೆದಿದೆ. ಲಾಠಿ ಏಟಿನ ವೇಳೆ ಆರನೇ ಕ್ಲಾಸ್ ಮತ್ತು ಪಿಯುಸಿ ಓದುವ ವಿದ್ಯಾರ್ಥಿಗಳಿಗೂ ಲಾಠಿಯಿಂದ ಪೆಟ್ಟು ಬಿದ್ದಿದ್ದು ಪೊಲೀಸರ ವಿರುದ್ಧ ಸ್ಥಳೀಯರು ಗರಂ ಆಗಿ ತಿರುಗಿ ಬಿದ್ದಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ವೀಕೆಂಡ್ ಆಗಿದ್ದರಿಂದ ಬೆಳಗ್ಗಿನಿಂದಲೂ ತಣ್ಣೀರುಬಾವಿ ಬೀಚ್ ಗೆ ಬರುತ್ತಿದ್ದ ಜನರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ನಿನ್ನೆಯಿಂದಲೂ ಬ್ಲಾಕ್ ಆಗಿತ್ತು. ಭಾನುವಾರ ಸಂಜೆ ಅಲ್ಲಿ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಥಳಿಸಿದ್ದಾರೆ.

ಲಾಠಿಯ ಏಟಿನಿಂದ ಆರನೇ ಕ್ಲಾಸ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರ ಹಲ್ಲೆಯಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಡಲೇ ಸ್ಥಳೀಯ ಜನರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದು, ಫೆರಾವ್‌ ಹಾಕಿದ್ದಾರೆ. ನೀವು ಲಾಠಿಯಲ್ಲಿ ಹೊಡೆದಿದ್ದು ಯಾಕೆ ಎಂದು ಮೂವರು ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಪಣಂಬೂರು ಪೊಲೀಸರ ಕಾರ್ಯ ವೈಖರಿ ಬಗ್ಗೆ ಸ್ಥಳೀಯರು ಗರಂ ಆಗಿದ್ದಾರೆ. ಘಟನೆ ಬಗ್ಗೆ ಶಾಸಕ ವೇದವ್ಯಾಸ ಕಾಮತ್‌ ಮೂಲಕ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದೆ. ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುವ ವಿಡಿಯೋ ವೈರಲ್ ಆಗಿದೆ.