ಸೀ ಆ್ಯಂಬುಲೆನ್ಸ್‌ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ: 21 ಕೋ.ರೂ. ಮೀಸಲಿಗೆ ಪ್ರಸ್ತಾವನೆ

ಸೀ ಆ್ಯಂಬುಲೆನ್ಸ್‌ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ: 21 ಕೋ.ರೂ. ಮೀಸಲಿಗೆ ಪ್ರಸ್ತಾವನೆ

ಉಡುಪಿ: ಬಹುಬೇಡಿಕೆಯ ಸೀ ಆ್ಯಂಬುಲೆನ್ಸ್‌ (ಸಮುದ್ರ ಆ್ಯಂಬುಲೆನ್ಸ್‌) ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗೆ ತಲಾ 1ರಂತೆ ಸೀ ಆ್ಯಂಬುಲೆನ್ಸ್‌ ಒದಗಿಸಬೇಕು. ಇದಕ್ಕಾಗಿ ತಲಾ 7 ಕೋಟಿಯಂತೆ ಒಟ್ಟು 21 ಕೋ.ರೂ.ಗಳನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿರಿಸುವಂತೆ ಕೋರಿ ಮೀನುಗಾರಿಕೆ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವೈದ್ಯರು ಹಾಗೂ ಸಿಬಂದಿ ನೇಮಕವೂ ಇದರಲ್ಲಿಯೇ ಸೇರಲಿದೆ.

500ಕ್ಕೂ ಅಧಿಕ ಮಂದಿಯ ರಕ್ಷಣೆ

ಸಿಎಸ್‌ಪಿ ಮೂಲಗಳ ಪ್ರಕಾರ ಕಳೆದ ದಶಕದಲ್ಲಿ 80ಕ್ಕೂ ಹೆಚ್ಚು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 500ಕ್ಕೂ ಅಧಿಕ ಮೀನುಗಾರರನ್ನು ರಕ್ಷಿಸಲಾಗಿದೆ. ಸೀ ಆ್ಯಂಬುಲೆನ್ಸ್‌ನಂತೆ ತ್ವರಿತವಾಗಿ ಸೇವೆ ಸಲ್ಲಿಸುವ ಸೌಲಭ್ಯಗಳಿಲ್ಲದಿರುವುದರಿಂದ ಸಂಕಷ್ಟದಲ್ಲಿರುವ ಮೀನುಗಾರರ ನೆರವಿಗೆ ಧಾವಿಸುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸಿಎಸ್‌ಪಿ ಸಿಬಂದಿ. 2020ರಿಂದ 2022ರ ವರೆಗೆ ಸಮುದ್ರದಲ್ಲಿ 214 ಮಂದಿ ಮೃತಪಟ್ಟಿದ್ದಾರೆ.

ಬಹುಕಾಲದ ಬೇಡಿಕೆ

ಪ್ರಸ್ತುತ ಸಿಎಸ್‌ಪಿಯೊಂದಿಗೆ 12 ಟನ್‌ ಸಾಮರ್ಥ್ಯದ 9 ದೋಣಿಗಳು ಮತ್ತು ಐದು ಟನ್‌ ಸಾಮರ್ಥ್ಯದ 4 ದೋಣಿಗಳಿವೆ. ಆದರೆ ಜೀವರಕ್ಷಣೆ ಕಾರ್ಯಾಚರಣೆಗೆ ಇವು ಪರಿಣಾಮಕಾರಿಯಲ್ಲ.

ಕರಾವಳಿ ಕಾವಲು ಪಡೆ ವ್ಯಾಪ್ತಿಯ ಮೂರು ಜಿಲ್ಲೆಗಳಿಗೂ ಒಂದೊಂದು ಸೀ ಆ್ಯಂಬುಲೆನ್ಸ್‌ ಒದಗಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ರಾಮಚಾರಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.