ಬಜಾಜ್ ಫೈನಾನ್ಸ್ ಕಾರ್ಡ್ ಗ್ರಾಹಕರೇ ಎಚ್ಚರ..!!

ನಿಮ್ಮ ಕಾರ್ಡ್ ಬಳಸಿ ಶಾಪಿಂಗ್ ಮಾಡೋ ವಂಚಕರಿದ್ದಾರೆ

ನೀವು ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿದ್ದು ಕಾರ್ಡ್ ಹಳೆಯದಾಗಿದೆ ಅಂತ ಸುಮ್ಮನಿದ್ದರೆ ಈ ಸುದ್ದಿಯನ್ನೊಮ್ಮೆ ಕೇಳಿ. ಇಲ್ಲವಾದರೆ ನಿಮ್ಮ ಕಾರ್ಡ್ ಅನ್ನು ವಂಚಕರು ದುರ್ಬಳಕೆ ಮಾಡುತ್ತಾರೆ ಇರಲಿ ಎಚ್ಚರ. ಬಜಾಜ್ ಫೈನಾನ್ಸ್ ಕಾರ್ಡ್ ಕೆಲಸಗಾರನಿಂದಲೇ ಇಂತಹ ಒಂದು ದೋಖಾ ನಡೆಯುತ್ತಿದೆ. ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನ ಟಾರ್ಗೇಟ್ ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ನಗರದ ಕೇಂದ್ರ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬಜಾಜ್ ಪೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ವಿಕಾಸ್, ಗ್ರಾಹಕರಿಗೆ ವಂಚನೆ ಎಸಗಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ. ಅದರಂತೆ ಹಳೆಯ ಬಜಾಜ್ ಫೈನಾನ್ಸ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈತ, ಅಂತಹ ಗ್ರಾಹಕರ ದಾಖಲೆ ನೀಡಿ ಹೊಸ ಸಿಮ್ ಖರೀದಿ ಮಾಡಿಕೊಳ್ಳುತ್ತಿದ್ದನು. ಬಳಿಕ ಅದೇ ಸಿಮ್ ಕಾರ್ಡ್ ಬಳಸಿ ಬಜಾಜ್ ಕಾರ್ಡ್ ಖರೀದಿ ಮಾಡುತ್ತಿದ್ದನು.

ಗ್ರಾಹಕರ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಬಜಾಜ್ ಕಂಪನಿಯ ಕಾರ್ಡ್ ಖರೀದಿಸಿದ ನಂತರ ಅಂತಹ ಕಾರ್ಡ್ ಮೂಲಕ ಅಮೇಜಾನ್​ನಲ್ಲಿ ಬೆಲೆಬಾಳುವ ಮೊಬೈಲ್ ಖರೀದಿ ಮಾಡುತ್ತಿದ್ದನು. ಹೀಗೆ ಖರೀದಿಸಿದ ಮೊಬೈಲ್​ಗಳನ್ನು ಓಎಲ್​ಎಕ್ಸ್​​ನಲ್ಲಿ ಮಾರಾಟ ಮಾಡುತ್ತಿದ್ದನು. ಇದೇ ರೀತಿ ಮೊಬೈಲ್​ಗಳನ್ನು ಮಾರಾಟ ಮಾಡಿದ ಆರೋಪಿ ವಿಕಾಸ್, 14 ಲಕ್ಷ ಹಣ ಮಾಡಿಕೊಂಡಿದ್ದಾನೆ.

ಸದ್ಯ ಗ್ರಾಹಕರಿಗೆ ಆಗುತ್ತಿದ್ದ ವಂಚನೆ ಬಗ್ಗೆ ಬಜಾಜ್ ಕಂಪನಿಯು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರು, ವಿಕಾಸ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪುಣೆಯ ವಿಮಂತಲ ಠಾಣೆಯಲ್ಲೂ ಈತನ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ. ಅಲ್ಲೂ ಇದೇ ರೀತಿ ವಂಚಿಸಿದ್ದ ಆರೋಪಿ ವಿಕಾಸ್, ಬೆಂಗಳೂರಿನಲ್ಲಿ ಬಜಾಜ್ ಪೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಇಲ್ಲೂ ವಂಚನೆ ಎಸಗುತ್ತಿದ್ದನು. ಸದ್ಯ ಆರೋಪಿಯನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.