ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್‌ ಫಿಕ್ಸ್‌..!

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್‌ ಫಿಕ್ಸ್‌..!

ಅಯೋಧ್ಯೆಯಲ್ಲಿ ರಾಮಮಂದಿರವನ್ನು ಜನವರಿ 1, 2024 ರಂದು ತೆರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಇಂದು ತ್ರಿಪುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯ ವರ್ಷದಲ್ಲಿ ದೇವಾಲಯದ ಬಾಗಿಲು ತೆರೆಯುವುದನ್ನು ಖಚಿತಪಡಿಸಿದ್ದಾರೆ. 2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು ಮತ್ತು ದೇವಾಲಯದ ತೆರೆಯುವಿಕೆಯು ಆಡಳಿತಾರೂಢ ಬಿಜೆಪಿಗೆ ಒಂದು ಮೈಲಿಗಲ್ಲು ಎಂದು ನಿರೀಕ್ಷಿಸಲಾಗಿದೆ. 

ತ್ರಿಪುರಾದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ರಾಮ ಮಂದಿರ ಉದ್ಘಾಟನೆಯ ದಿನಾಂಕವನ್ನೂ ಫಿಕ್ಸ್ ಮಾಡಿದ್ದಾರೆ. "ಕಾಂಗ್ರೆಸ್ ನ್ಯಾಯಾಲಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಯಿತು. ಆದರೆ, ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ನಿರ್ಮಾಣವನ್ನು ಪ್ರಾರಂಭಿಸಿದರು’’ ಎಂದೂ ತ್ರಿಪುರಾದಲ್ಲಿ ಅಮಿತ್‌ ಶಾ ಹೇಳಿದ್ದಾರೆ. 

ನವೆಂಬರ್‌ನ 2022ರಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂದಿರದ ನಿರ್ಮಾಣವು ಅರ್ಧದಷ್ಟು ಹಂತವನ್ನು ದಾಟಿದೆ ಮತ್ತು ಡಿಸೆಂಬರ್‌ ವೇಳೆಗೆ ಅದು ಸಿದ್ಧವಾಗಲಿದೆ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್ ದಶಕಗಳಿಂದ ಕಾನೂನು ವಿವಾದದಲ್ಲಿ ಸಿಲುಕಿದ್ದ ಸ್ಥಳದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದ ಬಳಿಕ ಹಾಗೂ ಜಾಗವನ್ನು ಹಸ್ತಾಂತರ ಮಾಡಿದ ಬಳಿಕ ಆಗಸ್ಟ್ 2020 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆಯನ್ನು ಮಾಡಿದರು.

ರಾಮ ಮಂದಿರ ಪುರ್ಣಗೊಂಡ ಬಳಿಕ ದೇವಾಲಯವು ನೆಲ ಅಂತಸ್ತಿನಲ್ಲಿ 160 ಅಂಕಣಗಳನ್ನು, ಮೊದಲ ಮಹಡಿಯಲ್ಲಿ 132 ಅಂಕಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಅಂಕಣಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಹಾಗೆ, ದೇಗುಲದಲ್ಲಿ ಐದು ಮಂಟಪಗಳು ಇರುತ್ತವೆ. ಅಲ್ಲದೆ, ಈ ಜಾಗದಲ್ಲಿ ಯಾತ್ರಿಕರ ಸೌಕರ್ಯ ಕೇಂದ್ರ, ವಸ್ತುಸಂಗ್ರಹಾಲಯ, ದಾಖಲೆಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಆಡಳಿತಾತ್ಮಕ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳು ಇರುತ್ತವೆ ಎಂದು ತಿಳಿದುಬಂದಿದೆ.