ಮಂಗಳೂರು:  "ಬೈರಾಸ್ ಗೊಬ್ಬು" ಅಡ್ಡೆಗೆ ಪೋಲೀಸ್ ದಾಳಿ - ಸಿನಿಮೀಯ ಮಾದರಿಯಲ್ಲಿ ಪಾರ್ಟಿಗೆ ಬದಲಾದ ಇಸ್ಪೀಟ್ ಅಡ್ಡ
ಪೊಲೀಸರೇ ಜೂಜುಕೋರರ ರಕ್ಷಕರಾದರೇ..?
ಬುಕ್ಕಿ ನಿತಿನ್ ಮತ್ತು ಕೊಂಬು ರಾಜೇಶ್ ಬಂಧನ ಅಸಾಧ್ಯವೇ..?
ಇಲ್ಲಿದೆ ನೋಡಿ ದಕ್ಷ ನ್ಯೂಸ್ ವಿಸ್ತಾರ ವರದಿ

ಮಂಗಳೂರು: ನಿನ್ನೆ ನಡೆದ ಆ ಘಟನೆ ನಿಜಕ್ಕೂ ಅನುಮಾನ ಸೃಷ್ಟಿಸಿತ್ತು. ಪೊಲೀಸ್ ಇಲಾಖೆಯು ಜೂಜು ಕೋರರ ಬೆನ್ನ ಹಿಂದೆ ನಿಂತಿದ್ಯಾ ಅನ್ನುವ ಪ್ರಶ್ನೆ ಮೂಡುವಂತೆ ಮಾಡಿತ್ತು. ಅಷ್ಟಕ್ಕೂ ಈ ಅನುಮಾನಕ್ಕೆ ಕಾರಣ ಏನು ಅನ್ನುವುದನ್ನು ವಿವರಿಸ್ತೇವೆ ಮುಂದೆ ಓದಿ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಸ್ಪೀಟ್ ಕ್ಲಬ್‌ಗಳು ಖಾಕಿಗಳ ಕಣ್ಣು ತಪ್ಪಿಸಿ ನಡೆಯುವುದು ಮಾಮೂಲಿ ಎಂಬ0ತಾಗಿದೆ. ಬೈರಾಸ್ ಗೊಬ್ಬು ಸದ್ಯ ಕರಾವಳಿಯಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಕಾರ್ಡ್ ಪ್ಲೇ. ಬೈರಾಸ್ ಗೊಬ್ಬು ಎಂಬ ದಂಧೆಯ ಕಿಂಗ್ ಪಿನ್ ಗಳಾದ ನಿತಿನ್ ಕೊಟ್ಟಾರಿ ಕೊಣಾಜೆ ಹಾಗೂ ಕೈಕಂಬ ನಿವಾಸಿ ರಾಜೇಶ್ ಅಲಿಯಾಸ್ ಕೊಂಬು ರಾಜೇಶ್ ಎಂಬಾತರು ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಒಡ್ಡೂರು ಫಾರ್ಮ್ಸ್ ಹತ್ತಿರ ಒಂದು ಮನೆಯಲ್ಲಿ ಬೈರಾಸ್ ಗೊಬ್ಬು ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ನಮ್ಮ ದಕ್ಷ ನ್ಯೂಸ್‌ನ ಪ್ರತಿನಿಧಿ ಪೊಲೀಸರಿಗೆ ತಿಳಿಸಿದ್ದರು.

ಎರಡೂವರೆ ಗಂಟೆ ಬಿಟ್ಟು ಸ್ಥಳಕ್ಕೆ ಬಂದ ಪೊಲೀಸರು

ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಿತಿನ್, ರಾಜೇಶ್, ಡೆನ್ಝಿಲ್ ಎಂಬವರು ಸೇರಿಕೊಂಡು ಬೈರಾಸ್ ಗೊಬ್ಬು ನಡೆಸುತ್ತಿದ್ದರು. ಈ ಬಗ್ಗೆ ನಮ್ಮ ಪ್ರತಿನಿಧಿ ಪೊಲೀಸ್ ನಂಬರ್ 112 ಗೆ ಕರೆ ಮಾಡಿ ಹೀಗೀಗೆ ನಡೆಯುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದರು. ಪೊಲೀಸರಿಗೆ ಕರೆ ಮಾಡಿದ ತಕ್ಷಣವೇ ಅವರು ಇಂತಿಷ್ಟು ಸಮಯದ ಒಳಗೆ ಘಟನಾ ಸ್ಥಳಕ್ಕೆ ಬರಬೇಕು ಅನ್ನುವುದು ನಿಯಮ. ಆದರೆ ಪೊಲೀಸರು ಮಾಹಿತಿ ತಿಳಿದೂ ಕೂಡ ಎರಡೂವರೆ ಗಂಟೆಗಳ ನಂತರ ಅಡ್ಡೆಗೆ ಭೇಟಿ ಕೊಟ್ಟದ್ದು ಅನುಮಾನ ಸೃಷ್ಟಿಸಿದೆ. 

ಜೂಜಾಟ ಮಾಡುವವರ ಜೊತೆ ಕೈಜೋಡಿಸಿದ್ದಾರಾ ಪೊಲೀಸರು? ನಡೆಯಿತಾ ಹೈಡ್ರಾಮಾ?

ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಜೂಜಾಟ ಆಗ್ತಾ ಇರಲಿಲ್ಲ. ಅವರೆಲ್ಲಾ ಆ ಜಾಗದಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ಪೊಲೀಸರು ನಮ್ಮ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ. ಸೂಕ್ಷö್ಮವಾಗಿ ಈ ಬೆಳವಣಿಗೆಯನ್ನು ಗಮನಿಸಿದ್ರೆ ಇಸ್ಪೀಟ್ ಅಡ್ಡೆ ಅದ್ಹೇಗೆ ಪಾರ್ಟಿ ನಡೆಯುವಂತಾಯಿತು. ಪೊಲೀಸರು ಇವರಿಗೆ ಮಾಹಿತಿ ನೀಡಿರಲೇಬೇಕಲ್ವಾ.? ಅಥವಾ ಬೇರೆ ಯಾರೋ ದಂಧೆಕೋರರಿಗೆ ಮಾಹಿತಿ ಕೊಟ್ರಾ? ಪೊಲೀಸರು ಎರಡು ಗಂಟೆ ನಂತರ ದಾಳಿ ಮಾಡಿದ್ದೇಕೆ ಅನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. 

ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಈ ಬಗ್ಗೆ ಗಮನಹರಿಸಬೇಕು..!

ಇದರ ಕಿಂಗ್ ಪಿನ್ ಆಗಿರುವ ಬುಕ್ಕಿ ನಿತಿನ್ ಕೊಟ್ಟಾರಿ ಮತ್ತು ಕೊಂಬು ರಾಜೇಶ್ ಕೈಕಂಬ ಎಂಬ ಇಬ್ಬರ ಬಂಧನ ಆಗುವವರೆಗೆ ಈ ದಂಧೆ ನಿಲ್ಲುವುದು ಕಷ್ಟಸಾಧ್ಯ. ಅಸಲಿಗೆ ಈ ಇಬ್ಬರು ಸಾಮನ್ಯದವರೆಂದು ಕೊಂಡರೆ ನಮ್ಮ ಮೂರ್ಖತನ. ಇವರು ಉಜಿರೆ, ಮಡಂತ್ಯಾರು, ಧರ್ಮಸ್ಥಳ, ಚೆನ್ನಗಿರಿ, ಭದ್ರಾವತಿ, ಶಿವಮೊಗ್ಗ ಇನ್ನೂ ರಾಜ್ಯದ ಹಲವು ಕಡೆ ಈ ಹಿಂದೆ ಇದೇ ಇಸ್ಪೀಟ್ ದಂಧೆ ನಡೆಸುತ್ತಿದ್ದರು. ಇಸ್ಪೀಟ್ ಆಟ ನಡೆಯುತ್ತಿದ್ದ ಜಾಗದಲ್ಲೇ ಪೊಲೀಸರು ದಾಳಿ ನಡೆಸುವಾಗ ಸಿನಿಮೀಯ ರೀತಿಯಲ್ಲಿ ಪಾರ್ಟಿ ರೀತಿಯಲ್ಲಿ ಬದಲಾಯಿಸಿದ್ದು ನೋಡುವಾಗ, ಮೇಲ್ನೋಟಕ್ಕೆ ಪೊಲೀಸರು ಇದರಲ್ಲಿ ಶಾಮೀಲಾಗಿರುವ ರೀತಿ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಬಗ್ಗೆ ಮಾನ್ಯ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!