ಮಂಗಳೂರು ಕಾವೂರು ಠಾಣಾ ವ್ಯಾಪ್ತಿಯ ಮಂಜಲ್ ಪಾದೆ ಬಳಿ ಅಕ್ರಮ ಮರಳುಗಾರಿಕೆ ರಹಸ್ಯ ಬಯಲು
ಮಂಜಲ್ ಪಾದೆ ದಾರಿಯಲ್ಲಿ ರಾತ್ರಿ ದೆವ್ವದ ಕಾಟ ಇದೆ ಎಂಬುದು ಒಂದೆಡೆ - ಅದೇ ಮತ್ತೊಂದೆಡೆ ರಾತ್ರಿ ಸಲೀಸಾಗಿ ಅಕ್ರಮ ಮರಳುಗಾರಿಕೆ

ಮಂಗಳೂರು : ಅದು ಫಲ್ಗುಣಿ ನದಿ ಹರಿಯುವ ಸುಂದರ ಮಂಗಳೂರು.. ಆಕಾಶದತ್ತ ಮುಖ ಮಾಡಿದರೆ ವಿಮಾನ ಹಾರಾಡುವ ಸುಂದರ ರಮಣೀಯ ದೃಶ್ಯ, ಅದೇಕೆಂದರೆ ಅಲ್ಲೇ ಹತ್ತಿರದಲ್ಲೇ ಇರುವುದು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇನ್ನೊಂದೆಡೆ ಮಂಗಳೂರು ಸೆಂಟ್ರಲ್ ಕಡೆಯಿಂದ ಸುರತ್ಕಲ್ ಕಡೆ ಸಾಗುವ ರೈಲುಗಳಿಗೆ ಮಾಡಿರುವ ಉತ್ಕೃಷ್ಟ ದರ್ಜೆಯ ರೈಲ್ವೇ ಬ್ರಿಜ್. ಇದೆಲ್ಲದರ ನಡುವೆ ಒಂದು ದೊಡ್ಡ ಮಟ್ಟದ ಅಕ್ರಮ ಮರಳುಗಾರಿಕೆ. ಹೌದು... ಇದೆಲ್ಲಾ ನಡೆಯುತ್ತಿರುವುದು ಮತ್ಯಾವುದೋ ಊರಿನಲ್ಲಿ ಎಂದು ತಿಳಿಯಬೇಡಿ.. ಇದು ನಮ್ಮ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಂಜಲ್ ಪಾದೆ ಎಂಬಲ್ಲಿ ನಡೆಯುತ್ತಿದೆ.


ಸಚಿನ್, ವಿಕ್ಟರ್, ಸುಧಾಕರ್, ಜುಬೆದ್ದುಲ್ಲಾ, ಆಶಿತ್, ಸಂದೇಶ್, ರೋಹಿತ್ ,ವೆಂಕಟ್ ಎಂಬವರು ನಡೆಸುವ ಈ ದಂಧೆ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.


ಮರಳು ಮಾಫಿಯಾದ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಬೊಂದೆಲ್ ಸಮೀಪದ ಮಂಜಲ್ ಪಾದೆ ಎನ್ನುವ ಪ್ರದೇಶ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ. ಇಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ 20ಕ್ಕೂ ಅಧಿಕ ನಾಡ ದೋಣಿಗಳನ್ನು ಬಳಸಿ ಮರುಳೆತ್ತಿ ದೊಡ್ಡ ಅಕ್ರಮ ದಂಧೆ ಪ್ರಾರಂಭ ಮಾಡಿಕೊಂಡಿದ್ದಾರೆ.

ಈ ಮಂಜಲ್ ಪಾದೆ ದಾರಿಯಲ್ಲಿ ದೆವ್ವದ ಕಾಟ ಇದೆ ಎಂದು ಜನರು ರಾತ್ರಿ ಭಯಪಡುತ್ತಾರೆ. ಇದು ನಿಜವಾಗಿಯೂ ದೆವ್ವದ ಕಾಟವೋ ಅಥವಾ ಅಕ್ರಮ ನಡೆಸಲು ಯಾರೋ ಹುಟ್ಟಿಸಿರುವ ಕಥೆಯೋ ಗೊತ್ತಿಲ್ಲ ಒಟ್ಟಾರೆಯಾಗಿ ಈ ಜಾಗದಲ್ಲಿ ದೆವ್ವದ ಕಾಟ ಎಂಬಂತೆ ಸುದ್ದಿಯಿದೆ ಆದರೆ ಇದೇ ಜಾಗದಲ್ಲಿ ರಾತ್ರಿ ಸಲೀಸಾಗಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯನ್ನೂ ತಮ್ಮದೇ ಆಸ್ತಿ ಎಂದು ತಿಳಿದುಕೊಂಡಿರುವ ಇವರು ಮರಳು ತುಂಬಿದ ಲಾರಿಗಳನ್ನು ಏಕಾಏಕಿ ಹೆದ್ದಾರಿಗೆ ನುಗ್ಗಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಮರಳು ಲಾರಿಗಳನ್ನು ಸಲೀಸಾಗಿ ಸಾಗುವಂತೆ ನೋಡಿಕೊಳ್ಳುತ್ತಾರೆ. ಇಂತಹ ಅಕ್ರಮ ನಡೆಯುತ್ತಿದ್ದರೂ ಇವರ ಹತ್ತಿರವೂ ಯಾವ ಅಧಿಕಾರಿಗಳಾಗಲಿ, ಸಂಬಂಧ ಪಟ್ಟ ಇಲಾಖೆಯು ಸುಳಿಯದೆ, ಇವರ ಎಲ್ಲಾ ಅಕ್ರಮಗಳಿಗೆ ಅಭಯಹಸ್ತವನ್ನೂ ದಯಪಾಲಿಸಿದೆ ಎನ್ನುವ ಮಾತುಗಳೂ ಕೇಳಿ ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!