ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿದ್ದ ವೆಬ್‌ಕ್ಯಾಮ್ ಕಳವು
ಎಲೆಕ್ಷನ್‌ಗಾಗಿ ಅಳವಡಿಸಿದ್ದ ವೆಬ್‌ಕ್ಯಾಮೆರಾ ಕಳ್ಳತನ

 

ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮರಾವನ್ನು ಸಿಮ್, ಮೆಮೊರಿ ಕಾರ್ಡ್ ಸಮೇತ ಕಳವು ಮಾಡಿರುವ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎ.24ರಂದು ಈ ವೆಬ್ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಎ.26ರಂದು ರಾತ್ರಿ 8 ಗಂಟೆಯವರೆಗಿನ ದೃಶ್ಯಗಳು ಇದರಲ್ಲಿ ಸೇವ್ ಆಗಿತ್ತು. ಇಡೀ ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿತ್ತು. ಅದರಲ್ಲಿದ್ದ ಮೆಮೊರಿ ಕಾರ್ಡ್ನಲ್ಲಿ ಸೇವ್ ಆಗಿತ್ತು. ಕ್ಯಾಮರಾ ಹಾಗೂ ಚುನಾವಣಾ ಧ್ವಜವನ್ನು ಕಳವು ಮಾಡಿದ್ದಾರೆ ಎಂದು ತೆಕ್ಕಾರು ಗ್ರಾಮ ಪಂಚಾಯತ್‌ನ ಸಿಬ್ಬಂದಿ, ಬೂತ್ ಲೆವೆಲ್ ಅಧಿಕಾರಿ ಮಹಮ್ಮದ್ ಸಿಯಾಬ್ ಇವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಮತದಾನ ಪ್ರಕ್ರಿಯೆ ಚಿತ್ರೀಕರಣ ಮತದಾನ ದಿನದ ಎಲ್ಲ ಪ್ರಕ್ರಿಯೆ ಈ ವೆಬ್‌ಕ್ಯಾಮ್‌ನಲ್ಲಿ ಚಿತ್ರೀಕರಣವಾಗಿದ್ದು, ಎಲ್ಲವೂ ಸೇವ್ ಆಗಿತ್ತು. ಸುಮಾರು 10,600 ರೂ. ಬೆಲೆ ಬಾಳುವ ಈ ಕ್ಯಾಮರಾದಲ್ಲೇ ಸಿಮ್, ಮೆಮೊರಿ ಕಾರ್ಡ್ ಅಳವಡಿಸಲಾಗಿತ್ತು. ಚುನಾವಣೆಯ ಬಳಿಕ ಎರಡು ದಿನ ಸರಕಾರಿ ರಜೆ ಇದ್ದು, ಎ.29ರಂದು ಮಧ್ಯಾಹ್ನ ತಾಲೂಕು ಚುನಾವಣಾ ಶಾಖೆಯಿಂದ ಬಂದ ಸೂಚನೆಯಂತೆ ವೆಬ್ ಕ್ಯಾಮರಾವನ್ನು ವಿ.ಎ. ಕಚೇರಿಗೆ ನೀಡಲು ಪಂಚಾಯತ್ ಸಿಬ್ಬಂದಿ ಸಂಜೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. 

ಶಾಲೆಯ ಹಳೇ ಬಾಗಿಲಿಗೆ ಲಾಕ್ ಇದ್ದರೂ, ದೂಡಿ ಬೂತ್ ಒಳಗೆ ಅಳವಡಿಸಿದ್ದ ಕ್ಯಾಮರಾ ಕಳವು ಮಾಡಿರುವುದು ಕಂಡು ಬಂದಿದೆ. ಒಳಗಿದ್ದ ಕೇಬಲ್‌ಗಳನ್ನು ಕತ್ತರಿಸಲಾಗಿದೆ. ಸೋಲಾರ್ ಲೈಟ್ ಸಹಿತ ಇತರ ವಯರುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ, ಕೇಬಲ್, ಸೋಲಾರ್ ಲೈಟ್ ಅಥವಾ ಪೀಠೋಪಕರಣಗಳನ್ನು ಕಳವು ಮಾಡಿಲ್ಲ. ಶಾಲೆಯ ಆವರಣದಲ್ಲಿ ಅಳವಡಿಸಲಾಗಿದ್ದ ಸ್ವೀಪ್ ಸಮಿತಿ ನೀಡಿದ ಚುನಾವಣಾ ಧ್ವಜವನ್ನು ಕಳವು ಮಾಡಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!