ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ.!! - "ಸೈನ್ ಇನ್ ಸೆಕ್ಯೂರಿಟಿ" ಮಹತ್ತರ ಕಾರ್ಯ
ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆರೋಪಿ ಲಾಕ್

ಕುಂದಾಪುರ: ಸಿಸಿ ಟಿವಿ ಮಾನಿಟರಿಂಗ್‌ ತಂಡದ ಸಮಯಪ್ರಜ್ಞೆಯಿಂದಾಗಿ ಸೊಸೈಟಿಯೊಂದರ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ‌.

ಶುಕ್ರವಾರ ತಡರಾತ್ರಿ 1:44 ರ ಸುಮಾರಿಗೆ ಮುಳ್ಳಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ‌ ಸಂಘದ ಹೊಸಾಡು ಶಾಖಾ ಕಟ್ಟಡದ ಕಿಟಕಿ ಮುರಿದು ಒಳ ಪ್ರವೇಶಿಸಿದ ಪ್ರಕಾಶ್ ಬಾಬು ಸೊಸೈಟಿಯಲ್ಲಿ ಸಿಬ್ಬಂದಿಗಳು ಕುಳಿತುಕೊಳ್ಳುವ ಮೇಜಿನ ಡ್ರಾವರ್ ಇನ್ನಿತರ ಕಡೆಗಳಲ್ಲಿ ತಡಕಾಡಿದ್ದಾನೆ. ಕಳ್ಳ ಒಳ ನುಗ್ಗಿದ ಕೂಡಲೇ ಎಚ್ಚೆತ್ತುಕೊಂಡ ಸೈನ್ ಇನ್‌ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿಗಳು ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಬಸವರಾಜ್ ಹಾಗೂ ಸಿಬ್ಬಂದಿಗಳು 10 ನಿಮಿಷದೊಳಗೆ ಸ್ಥಳಕ್ಕಾಗಮಿಸಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಗಂಗೊಳ್ಳಿ ಕ್ರೈಂ ಪಿಎಸ್ಐ ಬಸವರಾಜ್ ಸ್ಥಳಕ್ಕಾಗಮಿಸಿ ಕಿಟಕಿಯ ಮೂಲಕ ಲಾಠಿಯಿಂದ‌ ಬಡಿಯುತ್ತಿರುವಾಗ ಕಳ್ಳ ಹೊಡೆಯಬೇಡಿ ಸರ್.. ನಾನೇ ಹೊರಗಡೆ ಬರುತ್ತೇನೆ .. ಹೊಡೆಯಬೇಡಿ ಎಂದು ಗೋಗರೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಂಧಿತ ಆರೋಪಿ ಪ್ರಕಾಶ್ ಬಾಬು ಕೇರಳ ರಾಜ್ಯದಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದಿರುವ ಮಾಹಿತಿ ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ‌ ಬಂದಿದೆ. 

ಕಮಲಶಿಲೆ ಗೋಶಾಲೆಯಲ್ಲಿ ದುಷ್ಕರ್ಮಿಗಳು ಗೋ‌ ಕಳವಿಗೆ ಯತ್ನಿಸಿದ ಕೂಡಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ‌ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಸೈನ್ ಇನ್‌ ಸೆಕ್ಯೂರಿಟಿ‌ ತಂಡ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

                                      "ಸೈನ್ ಇನ್ ಸೆಕ್ಯೂರಿಟಿ" 

ದೇವಸ್ಥಾನ, ಜ್ಯುವೆಲ್ಲರಿ, ಅಂಗಡಿ, ಮನೆ, ಫ್ಲ್ಯಾಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಒಂದೆಡೆಯಾದರೆ, ಅಳವಡಿಸಿದ ಸಿಸಿ ಟಿವಿ ದೃಶ್ಯಾವಳಿಗಳನ್ನು ದಿನದ 24 ಗಂಟೆಯೂ ಸತತವಾಗಿ ಹದ್ದಿನ ಕಣ್ಣಿಟ್ಟು ಕಾಯುವುದು ಕಾರ್ಯಾಚರಣೆಯ ಇನ್ನೊಂದು ಭಾಗ, ಟಿವಿ, ಲ್ಯಾಪ್‌ಟಾಪ್ ಮೂಲಕ ನಿತ್ಯದ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಕುಂದಾಪುರದ ಅಂಕದಕಟ್ಟೆಯಲ್ಲಿ ಮಾಡುತ್ತಿದೆ. ಇದರ ವ್ಯವಸ್ಥಾಪಕ ಕೃಷ್ಣ ಪೂಜಾರಿ ಅವರ ತಂಡ ಪೊಲೀಸರ ಮಾರ್ಗದರ್ಶನದಲ್ಲಿ ರಾತ್ರಿ -ಹಗಲು ಸಿಸಿ ಟಿವಿ ಕಣ್ಗಾವಲು ಕಾಯುತ್ತದೆ. 60 ಕ್ಯಾಮೆರಾಗಳ ಮಾನಿಟರಿಂಗ್ ಮಾಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅಳವಡಿಸಿರುವ ಬರೋಬ್ಬರಿ 450 ಕ್ಯಾಮೆರಾಗಳನ್ನು ಮಾನಿಟರಿಂಗ್ ಮಾಡುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಹೆಚ್ಚಿನ ಧಾರ್ಮಿಕ ಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳುಹಾಗೂ ಸಾರ್ವಜನಿಕರು ಈಗಾಗಲೇ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಗ್ರಾಹಕರಲ್ಲದೆ ತಮ್ಮ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ರೀತಿಯ ಪ್ರಯತ್ನ ಹಾಗೂ ಘಟನೆಗಳು ಕಂಡು ಬಂದಲ್ಲಿ ಸೆಕ್ಯುರಿಟಿ ಸಂಸ್ಥೆ ಸಂಬಂಧಿಸಿದವರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!