ಕುಪ್ಪೆಪದವು: ಪತ್ರಕರ್ತರಿಂದ ಬಡ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ
ಕುಪ್ಪೆಪದವು: ಪತ್ರಕರ್ತರಿಂದ ಬಡ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿ ಹಸ್ತಾಂತರ
ಬಡ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸಿದ ಪತ್ರಕರ್ತರು

ಕುಪ್ಪೆಪದವು: ದೃಷ್ಟಿ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ರಾಜೀವ ಕುಲಾಲ್ ಎಂಬುವವರಿಗೆ ಪತ್ರಕರ್ತರಾದ ಧನಂಜಯ ಗುರುಪುರ ಹಾಗೂ ಮೋಹನದಾಸ್ ಮರಕಡ ಸೇರಿ ವಿವಿಧ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವು ಪಡೆದು ಕುಪ್ಪೆಪದವಿನಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ. ಈ ಮೂಲಕ ರಾಜೀವ ಕುಲಾಲ್-ಭಾರತಿ ಕುಲಾಲ್ ದಂಪತಿಗಳ ಜೀವನಕ್ಕೆ ನೆರವಾಗಿದ್ದಾರೆ.

ದೃಷ್ಟಿಯಿಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ರಾಜೀವ ಕುಲಾಲ್ ಸಣ್ಣ ಗೂಡಂಗಡಿಯೊಂದನ್ನು ಹೊಂದಿದ್ದು, ಕೊರೊನಾ ಕಾಲದಲ್ಲಿ ಇವರ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿತ್ತು. ವಿಷಯ ತಿಳಿದ ಪತ್ರಕರ್ತ ಧನಂಜಯ ಗುರುಪುರ ವರದಿಯೊಂದನ್ನು ಮಾಡಿ ಸಮಾಜದ ಗಮನ ಸೆಳೆದರು. ಈ ವರದಿ ಆಧರಿಸಿ ಮಂಗಳೂರಿನ ಪತ್ರಕರ್ತ ಮೋಹನದಾಸ್ ಮರಕಡ ಅಭಿಯಾನದ ಮೂಲಕ ಈ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ಇದಕ್ಕೆ ಪೂರಕವಾಗಿ ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಪಿ.ಹಮ್ಮಬ್ಬ ಮತ್ತು ಪಂಚಾಯತ್ ಆಡಳಿತ ಬಡ ಕುಟುಂಬಕ್ಕೆ ಜಾಗದ ವ್ಯವಸ್ಥೆ ಮಾಡಿಕೊಟ್ಟಿತು. ಜತೆಗೆ ಸ್ವತಃ ಹಮ್ಮಬ್ಬರೇ ಗುಡ್ಡದಂತಿದ್ದ ಜಾಗ ಸಮತಟ್ಟು ಮಾಡಿಕೊಟ್ಟು ನೆರವಾದರು.

ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ ಮೋಹನದಾಸ್ ಮರಕಡ ಹಾಗೂ ಧನಂಜಯ ಗುರುಪುರ ಸೇರಿ ಭಾರತಿಯಕ್ಕನ ಮನೆಗೆ ಆಗೋಣ ಆಸರೆ ಅಭಿಯಾನ ಆರಂಭಿಸಿದರು. ನಿಧಾನವಾಗಿ ಆರಂಭವಾದ ಅಭಿಯಾನ ಕಳೆದ ದೀಪಾವಳಿ ಸಂದರ್ಭ ಸ್ಪಷ್ಟ ರೂಪ ಪಡೆಯಿತು. ಆರಂಭದಲ್ಲಿ ಪೊಳಲಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಆರ್ಥಿಕ ನೆರವಿನ ಜತೆಗೆ ಆಶೀರ್ವದಿಸಿದರು. ಪತ್ರಕರ್ತರ ಪ್ರಯತ್ನಕ್ಕೆ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಅಧ್ಯಕ್ಷ ಜ್ಞಾನೇಶ್ ಆಳ್ವ ಬೆನ್ನೆಲುಬಾಗಿ ನಿಂತರು. ಸ್ಥಳೀಯ ಗುತ್ತಿಗೆದಾರ ವಿನೋದ್ ಕುಮಾರ್ ಅಂಬೆಲೊಟ್ಟು ದೀಪಾವಳಿ ಸಂದರ್ಭದಲ್ಲೇ ಕೆಲಸ ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಪಂಚಾಂಗ ಆಗಿ, ಗೋಡೆ ಎದ್ದು, ಸ್ಲ್ಯಾಬ್ ಪೂರ್ಣಗೊಂಡಿತು. ಈ ಹಂತದಲ್ಲಿ ಮತ್ತೆ ಲಯನ್ಸ್ ಕ್ಲಬ್ ಜತೆಗೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಮಂಜಣ್ಣ ಸೇವಾ ಬ್ರಿಗೇಡ್, ಸುರತ್ಕಲ್ ಗೆಳೆಯರ ಬಳಗ, ಬಜರಂಗದಳ ಸೇವಾ ಬ್ರಿಗೇಡ್ ಎಡಪದವು, ಕುಲಾಲರ ಮಾತೃ ಸಂಘ, ನೇತಾಜಿ ಬ್ರಿಗೇಡ್ ಮೂಡುಬಿದಿರೆ, ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಇತ್ಯಾದಿ ಹಲವು ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿದವು. ಗುತ್ತಿಗೆದಾರ ವಿನೋದ್ ಅಂಬೆಲೊಟ್ಟು ಕೂಡ ಪೂರಕವಾಗಿ ಸಹಕರಿಸಿದರು. ದುರ್ಗೇಶ್ವರಿ ಕನ್ ಸ್ಟ್ರಕ್ಷನ್ ಮಾಲಕ ಜಗದೀಶ್ ಪಾಕಾಜೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್‌ ಆರ್.ಕೆ, ಸ್ಥಳೀಯ ದಾನಿ ಪ್ರವೀಣ್ ಆಳ್ವ ಮೊದಲಾದವರು ಆರ್ಥಕವಾಗಿ ಮತ್ತು ವಸ್ತು ರೂಪದಲ್ಲಿ ಸಹಕರಿಸಿದರು.

ಅಗತ್ಯದ ಸಂದರ್ಭ ಶ್ರಮದಾನ ಮಾಡಿ ನೆರವಾದವರು ಬಡಜನ ಸೇವಾ ಫ್ರೆಂಡ್ಸ್ ತಂಡ. ತಂಡದ ಸ್ಥಾಪಕ ಮುನೀರ್ ನಡುಪಲ್ಲ ಆರಂಭದಿಂದಲೇ ಮನೆಯ ಬಗ್ಗೆ ವಿಚಾರಿಸುತ್ತ‌ ಮನೆಯ ಪಂಚಾಂಗ ಸಂದರ್ಭ ಹಾಗೂ ಕೊನೆಯಲ್ಲಿ ಪೇಂಟಿಂಗ್ ಕೆಲಸ ಶ್ರಮದಾನ ಮಾಡಿ ನೆರವಾದರು. ಜತೆಗೆ ಆರ್ಥಿಕ ನೆರವನ್ನೂ ಒದಗಿಸಿಕೊಟ್ಟರು. ಸ್ಥಳೀಯ ಹರಿಶ್ಚಂದ್ರ ಮತ್ತು ತಂಡ ಕೂಡ ಶ್ರಮದಾನದಲ್ಲಿ ನೆರವಾದರು.

ಮಾರ್ಚ್ 6ರಂದು ನೂತನ ಮನೆಯ ಹಸ್ತಾಂತರ ನಡೆಯಿತು. ಲಯನ್ಸ್ ಜಿಲ್ಲಾ ಗವರ್ನರ್ ಸಂಜಿತ್ ಶೆಟ್ಟಿ, ಲಯನ್ಸ್ ಕ್ಲಬ್ ಮಂಗಳೂರು ಕುಡ್ಲದ ಅಧ್ಯಕ್ಷ ಜ್ಞಾನೇಶ್ ಆಳ್ವ, ಪದಾಧಿಕಾರಿಗಳಾದ ಹರೀಶ್ ಆಳ್ವ, ಜ್ಯೋತಿ ಎಸ್.ಶೆಟ್ಟಿ ಮೊದಲಾದವರು ಮನೆ ಭಾಗವಹಿಸಿದ್ದರು. ಪೊಳಲಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಮುನೀರ್ ನಡುಪಲ್ಲ, ಕುಪ್ಪೆಪದವು ಗ್ರಾಪಂ ಪಿಡಿಒ ಸವಿತಾ ಮಂದೋಲ್ಕರ್, ಗ್ರಾಪಂ ಸದಸ್ಯರಾದ ಶರೀಫ್ ಕಜೆ, ರಫೀಕ್ ಮೊದಲಾದವರು ಕೃತಜ್ಞತಾ ಸಭೆಯಲ್ಲಿ ಭಾಗಿಯಾದರು.

Comments

https://newsdaksha.online/assets/images/user-avatar-s.jpg

0 comment

Write the first comment for this!