ಮಂಗಳೂರು:  "ನೆನಪಿದ್ಯ ಭೀಕರ ವಿಮಾನ ದುರಂತ"
ದುರ್ಘಟನೆಗೆ ಇಂದಿಗೆ 13ವರ್ಷ

ಮಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 13 ವರ್ಷವಾಗುತ್ತಿದೆ.

 ಬಜಪೆಯ ಕೆಂಜಾರಿನಲ್ಲಿ ನಡೆದ ಘೋರ ವಿಮಾನ ದುರಂತಕ್ಕೆ 13 ವರ್ಷವಾಗಿದೆ. 2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಲ್ಯಾಂಡ್‌ ಆಗುವ ಹಂತದಲ್ಲಿ ನಿಯಂತ್ರಣ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿತ್ತು. ಬೆಂಕಿ ಆವರಿಸಿ ಅದರಲ್ಲಿದ್ದ 158 ಮಂದಿ ಮೃತಪಟ್ಟಿದ್ದು,8 ಮಂದಿಯಷ್ಟೇ ಬದುಕುಳಿದಿದ್ದರು.

ಕರಾವಳಿ ಭಾಗದ ಜನ ಹೆಚ್ಚಾಗಿ ದುಬೈನಲ್ಲಿ ಹೆಚ್ಚಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ದುಬೈನಿಂದ ಪ್ರಯಾಣಿಕರನ್ನು ಹೊತ್ತು ಬಂದ ವಿಮಾನ ಇನ್ನೇನು ಕೆಲವೇ ಹೊತ್ತಿನಲ್ಲಿ‌ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ತಾಯಿನಾಡಿಗೆ ತಲುಪಿದೆವು ಎನ್ನುವ ಸಂಭ್ರಮದಲ್ಲಿದ್ದವರು ಭೀಕರ ದುರಂತದಲ್ಲಿ ಸಾವನ್ನಪ್ಪಿದ್ದರು ಎನ್ನುವುದ್ದನ್ನು ಮಂಗಳೂರಿಗರು ಎಂದಿಗೂ ಮರೆಯದ ಕಹಿ ಘಟನೆಯೊಂದು ನಡೆಯಿತು.

ಮುಲ್ಲ ಆ್ಯಂಡ್‌ ಮುಲ್ಲ ಸಂಸ್ಥೆ 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರೂ. ಪಡೆದವರೂ ಇದ್ದರು. ಆದರೆ ಈ ಪರಿಹಾರವನ್ನು ಮೃತಪಟ್ಟವರ ಆರ್ಥಿಕ ಆದಾಯ, ಅವರ ವಯಸ್ಸು ಇದೆಲ್ಲವನ್ನೂ ಲೆಕ್ಕ ಹಾಕಿ ನೀಡಲಾಗಿತ್ತು.

 ಈಗಲೂ ಪರಿಹಾರಕ್ಕಾಗಿ ಹೋರಾಟ.!

ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ “ಮೋಂಟ್ರಿಯಲ್‌ ಕನ್ವೆನನ್‌’ ಪ್ರಕಾರ ಆಗಿನ ಲೆಕ್ಕಾಚಾರದಂತೆ 75 ಲಕ್ಷ ರೂ.ನಷ್ಟು ಮೊತ್ತವನ್ನು ಮೊದಲ ಹಂತದಲ್ಲಿ ಎಲ್ಲ ಸಂತ್ರಸ್ತ ಕುಟುಂಬದವರಿಗೂ ನೀಡಬೇಕು ಎಂದು ಕುಟುಂಬದವರು ಕೇರಳದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದು. ಇದು ಸುಪ್ರೀಂ ಕೋರ್ಟ್‌ ವರೆಗೂ ತಲಪಿತು. ಇನ್ನೂ ಸುಮಾರು 45 ಕುಟುಂಬದವರು ಕಾನೂನು ಹೋರಾಟದಲ್ಲೇ ಇದ್ದಾರೆ. ಈ ನಡುವೆ ಏರ್‌ಇಂಡಿಯಾವನ್ನು ಟಾಟಾ ಸಮೂಹ ಖರೀದಿಸಿದ್ದು, ಮಾಲಕತ್ವ ಬದಲಾಗಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಹಾಗಾಗಿ ಪರಿಹಾರದ ಅರ್ಜಿಗಳನ್ನು ರದ್ದುಪಡಿಸುವಂತೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ದುರ್ಘಟನೆಯಲ್ಲಿ 158 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ ಮಡಿದವರ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ.

8 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದರು. ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ಸ್ಮರಣಾರ್ಥ ನಿರ್ಮಿಸಿದ ಪಾರ್ಕ್‌ನಲ್ಲಿ ಜಿಲ್ಲಾಡಳಿತದಿಂದ ಪ್ರತಿವರ್ಷ ಈ ದಿನ ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!