ಬೆಳ್ತಂಗಡಿ: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು.

ಪಡಂಗಡಿ ಪೊಯ್ಯಗುಡ್ಡೆಯಲ್ಲಿ ವಾಸವಿದ್ದು ಪ್ರಸ್ತುತ ವಿವಾಹವಾಗಿ ಒಂದು ವರ್ಷದಿಂದ ಚಿಕ್ಕಮಗಳೂರಿನ ಪತಿಯ ಮನೆಯಲ್ಲಿದ್ದರು. ಹೃದಯ ಬೇನೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ತೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ.

ಪಡಂಗಡಿಯಲ್ಲಿ ಪ್ರಾಥಮಿಕ, ಉಜಿರೆ ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 9ನೇ ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು.

ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿ ಪಡೆದು, ಮುಂದೆ ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ಪಳಗಿ ವಾಲಿಬಾಲ್ ಆಟದಲ್ಲಿ ಉನ್ನತ ಮಟ್ಟದ ಪ್ರದರ್ಶನ ನೀಡಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡ ಎರಡನೇ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಮಾಡುತ್ತಿದ್ದ ಸಂದರ್ಭ ಬಹುಬೇಡಿಕೆಯ ಆಟಗಾರ್ತಿಯಾಗಿ ಜನಮನ್ನಣೆ ಗಳಿಸಿದ್ದರು

ರಾಷ್ಟ್ರಮಟ್ಟದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಸಾಧನೆಯ ಹಾದಿಯಾಗಿದೆ. ಅವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಂಸಿ ಗೌರವಿಸಿದ್ದರು. ಅವರು ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!