ಮಂಗಳೂರು: ಬಿರುಸುಗೊಂಡ ಸಮುದ್ರದ ಅಲೆಗಳು - ಪ್ರವಾಸಿಗರಿಗೆ ತಡೆ
4 ದಿನ ಭಾರೀ ಮಳೆ ಸಾಧ್ಯತೆ

ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಾಮಾರುತ ಹಿನ್ನೆಲೆಯಲ್ಲಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಇಂದು ನಸುಕಿನಿಂದ ಹೆಚ್ಚಾಗಿದೆ. ಜಿಲ್ಲಾಡಳಿತದ ಆದೇಶದಂತೆ ಉಳ್ಳಾಲ, ಸೋಮೇಶ್ವರ ಸಮುದ್ರ ತೀರದಲ್ಲಿ ಬರುವ ಪ್ರವಾಸಿಗರನ್ನು ಬಂದೋಬಸ್ತ್ ನಲ್ಲಿರುವ ಹೋಂಗಾಡ್ಸ್೯ ವಾಪಸ್ಸು ಕಳುಹಿಸುತ್ತಿದ್ದಾರೆ‌.

ಇಂದು ನಸುಕಿನಿಂದ ಚಂಡಾಮಾರುತದ ಪ್ರಭಾವ ಉಳ್ಳಾಲದ ಸಮುದ್ರ ತೀರದ ಪ್ರದೇಶಗಳಿಗೆ ಗೋಚರಿಸಲು ಆರಂಭವಾಗಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆಕಲ್ಲುಗಳಿಗೆ ಬಹುವೇಗಗಳಲ್ಲಿ ಅಪ್ಪಳಿಸುತ್ತಿದೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಹೋಂಗಾಡ್ಸ್೯ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸಮುದ್ರ ತೀರಕ್ಕೆ ಬರುವ ಪ್ರವಾಸಿಗರನ್ನು ವಾಪಸ್ಸು ಕಳುಹಿಸಲಾಗುತ್ತಿದೆ.

ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿರುವ ಬಿಪರ್‌ಜಾಯ್ ಎಂಬ ಚಂಡ ಮಾರುತ, ಉತ್ತರ ದಿಕ್ಕಿನತ್ತ ಚಲಿಸಿದರೆ ಗೋವಾ, ಮುಂಬೈ ಕರಾವಳಿಗೆ ಅಪ್ಪಳಿಸಲಿದೆ. ಜೊತೆಯಲ್ಲೇ ಕೇರಳದಿಂದ ಮಹಾರಾಷ್ಟ್ರದ ಸಾಗರ ತೀರದ ಉದ್ದಕ್ಕೂ ಭಾರೀ ಮಳೆ ಆಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಜೂನ್ 8 ರಿಂದ ಜೂನ್ 10ರವರೆಗೆ ಪ್ರಕ್ಷುಬ್ಧ ವಾತಾವರಣ ಇರಲಿದೆ. ಚಂಡಮಾರುತಕ್ಕೆ ಬಿಪರ್‌ಜಾಯ್ ಎಂಬ ಹೆಸರನ್ನು ಬಾಂಗ್ಲಾ ದೇಶ ಸೂಚಿಸಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿತ್ತು.

ಇದರಿಂದ ರಾಜ್ಯದ ಪಶ್ಚಿಮದ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಗಾಳಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಭಾರೀ ಮಳೆಯೂ ಸುರಿಯುವ ಸಾಧ್ಯತೆ ಇದೆ. ಆದುದರಿಂದ ಈ ಅವಧಿಯಲ್ಲಿ ಮೀನುಗಾರರು ಮೀನುಗಾರಿಕೆ ಗಾಗಿ ಸಮುದ್ರಕ್ಕೆ ತೆರಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜಿಲ್ಲಾಡಳಿತದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕ ರಿಗೆ ಕೆಲವು ಸೂಚನೆಗಳನ್ನು ನೀಡಿದ್ದು, ಅದನ್ನು ಪಾಲಿಸುವಂತೆ ತಿಳಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!