31 ವರ್ಷಗಳ ನಂತರ ಮಂಗಳೂರಿನಲ್ಲಿ ಜಲಕ್ಷಾಮ, ಕಟೀಲು ದೇಗುಲದಲ್ಲಿ ಬತ್ತಿ ಹೋದ ನಂದಿನಿ ನದಿ
ನೀರಿನ‌ ಮಟ್ಟ ಕುಸಿತ, ಕಂಗೆಟ್ಟ ಹೋಟೆಲ್ ಉದ್ಯಮ, ಟ್ಯಾಂಕರ್ ಮೊರೆ ಹೋದ ಪಾಲಿಕೆ : ನೀರಿಗಾಗಿ ಹಾಹಾಕಾರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31 ವರ್ಷಗಳ ನಂತರ ಜಲ ಕ್ಷಾಮ ಬಂದಿದ್ದು, ಹೊಟೇಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ, ಕಟೀಲು ದೇವಸ್ಥಾನದಲ್ಲಿ ಬಳಿ ಹಾದು ಹೋಗುವ ನಂದಿನಿ ನದಿ ಬತ್ತಿ ಹೋದ ಪರಿಣಾಮ ಮಳೆಗಾಗಿ ದೇವಿಯ ಮೊರೆ ಹೋಗಲಾಗಿದ್ದು, ಇನ್ನೊಂದೆಡೆ, ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ‌ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಜಿಲ್ಲಾಡಳಿತವು ಎಎಂಆರ್ ಡ್ಯಾಂನಿಂದ ನೀರುನ್ನು ಬಿಟ್ಟಿದೆ.

ಕಟೀಲು ದೇವಸ್ಥಾನದ ಬಳಿ ಇರುವ ನಂದಿನಿ ನದಿ ನೀರಿನ ಹರಿವು ಜನವರಿ ತಿಂಗಳಲ್ಲಿ ನಿಂತಿದೆ. ಈ ಬಾರಿ ತುಂಬಾ ನೀರಿನ ಸಮಸ್ಯೆಯನ್ನು ಎದುರಿಸಿದ್ದೇವೆ. ಸದ್ಯ ಕಾಲು ತೊಳೆದು ದೇವಸ್ಥಾನದ ಒಳಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಇರುವ ನೀರಿನ ಲಭ್ಯತೆ ಒಂದು ವಾರದ ತನಕ ಸಾಕಾಗಬಹುದು. ಊಟಕ್ಕೆ ಸದ್ಯ ಹಾಳೆಯ ತಟ್ಟೆಯ ಬಳಕೆ ಮಾಡುತ್ತಿದ್ದೇವೆ. ಕ್ಷೇತ್ರದ ಶಾಲಾ-ಕಾಲೇಜುಗಳಿಗೆ ಬಿಸಿಯೂಟವನ್ನು ನಿಲುಗಡೆ ಮಾಡಿದ್ದೇವೆ. ದೇವರ ಎದುರು ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಿದ್ದು, ಮಳೆ ಸುರಿಯುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಅವರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ನಂದಿನಿ ನದಿ ಸಂಪೂರ್ಣ ಬತ್ತಿ ಹೋದ ಹಿನ್ನೆಲೆ ಕಟೀಲು ದೇಗುಲದಿಂದ ನೀಡಲಾಗುತ್ತಿದ್ದ ಶಾಲಾ ಮಕ್ಕಳ‌ ಬಿಸಿಯೂಟವನ್ನು ಸ್ಥಗಿತಗೊಳಿಸಲಾಗಿದೆ, ಕಟೀಲು ಕ್ಷೇತ್ರಕ್ಕೆ ಸಂಬಂಧಿಸಿದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಧ ದಿನ ಶಾಲೆ ನಡೆಸಲಾಗುತ್ತಿದೆ. ಕ್ಷೇತ್ರದ ಗೋವುಗಳಿಗೂ ನೀರಿನ ಬರ ಎದುರಾಗಿದ್ದು, ಕ್ಷೇತ್ರದ ಮುಂಭಾಗ ಕಾಲು ತೊಳೆಯುವ ನಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ದೇವಾಲಯಕ್ಕೆ ಆಗಮಿಸವ ಭಕ್ತರಿಗೆ ನಿತ್ಯ ಅನ್ನಸಂತರ್ಪಣೆಯನ್ನು ಹಾಳೆ ತಟ್ಟೆಯಲ್ಲಿ ನೀಡಲಾಗುತ್ತಿದೆ.

ಮಂಗಳೂರಿನಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ನೀರಿನ ಬರಕ್ಕೆ ಹೋಟೆಲ್ ಉದ್ಯಮ ಕಂಗೆಟ್ಟಿದೆ. ಏಪ್ರಿಲ್ ಎರಡನೇ ವಾರದಿಂದಲೇ ನೀರಿಗೆ ಸಮಸ್ಯೆ ಆರಂಭವಾಗಿದ್ದು, ಮೇ ಆರಂಭದಲ್ಲೇ ಮಹಾನಗರ ಪಾಲಿಕೆ ನೀರು ಸರಭರಾಜು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಹೊಟೇಲ್ ಮಾಲೀಕರು ಸ್ವಂತ ನೀರು ಅಥವಾ ಪ್ರೈವೇಟ್ ಟ್ಯಾಂಕ್ ಮೂಲಕ ನೀರನ್ನು ತಂದು ಉದ್ಯಮ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ನೀರಿನ ಟ್ಯಾಂಕರ್ ದರ ಕೂಡ ಗಗನಕ್ಕೆ‌ರುತ್ತಿದೆ. ಇನ್ನು ಒಂದು ವಾರ ಮಳೆ ಬರದಿದ್ದರೆ ಹೋಟೆಲ್ ಬಂದ್ ಮಾಡುವ ಸ್ಥಿತಿಯೂ ಇದೆ.

ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ‌ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಜಿಲ್ಲಾಡಳಿತವು ಎಎಂಆರ್ ಡ್ಯಾಂ ನಿಂದ ನೀರು ಬಿಟ್ಟಿದ್ದಾರೆ. ತುಂಬೆ ಡ್ಯಾಂನ ಮೇಲ್ಬಾಗದಲ್ಲಿರುವ ಎಎಂಆರ್ ಪವರ್ ಪ್ರಾಜೆಕ್ಟ್ ಡ್ಯಾಂ ಆಗಿದೆ. ಸದ್ಯ ನೀರನ್ನು ಬಿಟ್ಟಿದ್ದರಿಂದ ತುಂಬೆ ಡ್ಯಾಂನಲ್ಲಿ ನೀರಿ‌ನ ಮಟ್ಟ ಏರಿಕೆಯಾಗಿದ್ದು, ನಗರವಾಸಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ. ಸದ್ಯ ತುಂಬೆ ಡ್ಯಾಂನಲ್ಲಿ 4.3 ಮೀ ನೀರು ಸಂಗ್ರಹ ಇದ್ದು, ಎರಡು ದಿನಗಳ‌ ಹಿಂದೆ 1.61 ಮೀ.ಗೆ ಇಳಿಕೆ ಕಂಡಿತ್ತು.

ಜೀವ ನದಿ ನೇತ್ರಾವತಿ ಮೇ ತಿಂಗಳ ಹಿಂದೆಯೆ ತನ್ನ ಹರಿವು ನಿಲ್ಲಿಸಿದ್ದು, ಇನ್ನು ಮಳೆ ಬಾರದಿದ್ದರೆ ಮಂಗಳೂರು ನಗರದಲ್ಲಿ ನೀರಿಗಾಗಿ ಸಂಕಷ್ಟ ಹೆಚ್ಚಾಗಲಿದೆ. ನಗರದಲ್ಲಿ ಮಾತ್ರವಲ್ಲದೆ, ಗ್ರಾಮಾಂತರದಲ್ಲೂ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ನೇತ್ರಾವತಿ ನದಿ ಬತ್ತಿದ್ದರಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಶೀಘ್ರ ಮಳೆಯಾಗುವಂತೆ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಪೈಪ್ ಲೈನ್ ಮೂಲಕ ನೀರು ನೀಡಿದರೆ ಅಧಿಕ ನೀರು ಖರ್ಚು‌ ಆಗುವ ಸಾಧ್ಯತೆ ಇದೆ. ಹೀಗಾಗಿ ಮಂಗಳೂರು ಮಹಾನಗರ ಪಾಲೀಕೆ, ಟ್ಯಾಂಕರ್ ಮೊರೆ ಹೋಗಿದೆ. ಮಂಗಳೂರಿನಲ್ಲಿ ಒಂದೊಂದು ಭಾಗಕ್ಕೆ ಒಂದೊಂದು ದಿನ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನು ಕೆಲವು ಕಡೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತೀರಾ ಅಗತ್ಯ ಇರುವ ಕಡೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಂದೂರ್ ವೆಲ್ನಿಂದ ಈ ನೀರಿನ ಪೂರೈಕೆ ಮಅಡಲಾಗುತ್ತಿದೆ.

ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರೆತೆ ಕಾಣಿಸಿಕೊಂಡಿದ್ದು, ಇಲಾಖೆಯ ಪ್ರಕಾರ ಮೂಲ್ಕಿ ಮೂರು ಶಾಲೆಗಳಿಗೆ ಮತ್ತು ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಗರದ ಪ್ರಮುಖ ವಿದ್ಯಾಸಂಸ್ಥೆಯಲ್ಲಿ ದಿನವೊಂದಕ್ಕೆ 10 ಟ್ಯಾಂಕರ್‌ ನೀರನ್ನು ಪೂರೈಕೆ ಮಾಡಿಕೊಂಡು ಪರಿಸ್ಥಿತಿ ಸುಧಾರಣೆ ಮಾಡುವ ಕಾರ್ಯ ನಡೆಸಲಾಗುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!