ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ಸಾವಿರ ಏಡ್ಸ್ ರೋಗಿಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ಸಾವಿರ ಏಡ್ಸ್ ರೋಗಿಗಳು

ಮಂಗಳೂರು: ಏಡ್ಸ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 10,431 ರೋಗಿಗಳು ಇದ್ದಾರೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ. ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹೇಳಿದ್ದಾರೆ. 

ಡಿಸೆಂಬರ್ 1ರಂದು ಕಣಚೂರು ವೈದ್ಯಕೀಯ ಸಂಸ್ಥೆಯಲ್ಲಿ ನಡೆಯಲಿರುವ ಏಡ್ಸ್ ತಡೆ ದಿನಾಚರಣೆಯ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಈ ವಿವರ ಒದಗಿಸಿದ್ದಾರೆ. 

2007-08ರ ಸಾಲಿನಲ್ಲಿ 1,169 ಎಚ್‌ಐವಿ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿದ್ದವು. ಮುಂದಿನ ವರ್ಷ 1064 ಪ್ರಕರಣಗಳು ಇದ್ದವು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಮೂರಂಕಿಗೆ ಇಳಿಯಿತು. 2016-17ನೇ ಸಾಲಿನಲ್ಲಿ ಮೊದಲ ಬಾರಿ 600ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾದವು. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ.

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ತಡೆಗೆ ಸಂಬಂಧಿಸಿ 19 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಇವೆ. 3 ಎಆರ್‌ಟಿ ಕೇಂದ್ರಗಳಿದ್ದು 13 ಲಿಂಗ್ ಎಆರ್‌ಟಿ ಕೇಂದ್ರಗಳು ಇವೆ. 54 ರೆಡ್ ರಿಬ್ಬನ್ ಕ್ಲಬ್‌ಗಳು, 14 ರಕ್ತ ನಿಧಿ ಕೇಂದ್ರಗಳು ಮತ್ತು 3 ರಕ್ತ ಶೇಖರಣಾ ಘಟಕಗಳು ಇವೆ ಎಂದು ಡಾ.ತಿಮ್ಮಯ್ಯ ವಿವರಿಸಿದರು.

ಏಡ್ಸ್ ತಡೆ ದಿನಾಚರಣೆ ಅಂಗವಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 7 ಗಂಟೆಗೆ ಬಾವುಟಗುಡ್ಡದಿಂದ ಎಸ್‌ಡಿಎಂ ಕಾನೂನು ಕಾಲೇಜಿನ ವರೆಗೆ ಜಾಥಾ ನಡೆಯಲಿದೆ. ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸುವರು. ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸುವರು ಎಂದು ಅವರು ವಿವರಿಸಿದರು.

ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಹಾಗೂ ಕಾರ್ಯಕ್ರಮ ಸಂಯೋಜಕ ಮಹೇಶ್ ಜೊತೆಗಿದ್ದರು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!