"ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ"
ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ
146 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಭಾರೀ ಅಂತರದ ಸೋಲನುಭವಿಸಿದೆ. ಬ್ಯಾಟಿಂಗ್ ಕುಸಿತ ಕಂಡ ಭಾರತವು ಇನ್ನಿಂಗ್ಸ್ ಮತ್ತು 32 ರನ್ ಗಳ ಅಂತರದಿಂದ ಸೋತಿದೆ. ದಕ್ಷಿಣ ಆಫ್ರಿಕಾವು ಸೆಂಚುರಿಯನ್ ಪಂದ್ಯವನ್ನು ಮೂರು ದಿನಗಳಲ್ಲೇ ಗೆದ್ದುಕೊಂಡಿತು.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 131 ರನ್ ಗಳಿಗೆ ಆಲೌಟಾಯಿತು. ವಿರಾಟ್ ಹೊರತು ಬೇರೆ ಯಾರು ಕ್ರೀಸ್ ಕಚ್ಚಿ ನಿಲ್ಲುವ ಧೈರ್ಯ ತೋರಲಿಲ್ಲ. ವಿರಾಟ್ ಕೊಹ್ಲಿ ಅವರು 82 ಎಸೆತಗಳಿಂದ 76 ರನ್ ಗಳಿಸಿದರು. ಇದರಲ್ಲಿ ಅವರು 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು.

ಇದೇ ವೇಳೆ ಅವರು 146 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಬರೆದರು. ಸೆಂಚುರಿಯನ್ ಟೆಸ್ಟ್‌ ನ ಮೊದಲ ಇನ್ನಿಂಗ್ಸ್ ನಲ್ಲಿ 38 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್ ಗಳಿಸಿದ ಕೊಹ್ಲಿ ಈ ಮೂಲಕ 2023 ರಲ್ಲಿ 2000 ಕ್ಕಿಂತ ಹೆಚ್ಚು ರನ್‌ ಪೇರಿಸಿದ ಸಾಧನೆ ಮಾಡಿದರು. 2023 ರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್ ಶುಭಮನ್ ಗಿಲ್ 2154 ರನ್ ಪೇರಿಸಿದ್ದಾರೆ. ಅವರು 48 ಪಂದ್ಯಗಳಲ್ಲಿ ಈ ರನ್ ಗಳಿಸಿದ್ದಾರೆ. ಡೇರಿಲ್ ಮಿಚೆಲ್ 2023 ರಲ್ಲಿ ಇದುವರೆಗೆ 49 ಪಂದ್ಯಗಳಲ್ಲಿ 1970 ರನ್ ಗಳಿಸಿದ್ದಾರೆ.

ಕೊಹ್ಲಿ ಏಳನೇ ಬಾರಿ ಕ್ಯಾಲೆಂಡರ್ ವರ್ಷದಲ್ಲಿ 2000 ಅಂತರಾಷ್ಟ್ರೀಯ ರನ್‌ ಗಳನ್ನು ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರು 2012 (2186 ರನ್), 2014 (2286 ರನ್), 2016 (2595 ರನ್), 2017 (2818 ರನ್), 2018 (2735 ರನ್) ಮತ್ತು 2019 (2455 ರನ್) ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳ ಸಾಧನೆ ಮಾಡಿದ್ದರು. 1877ರಲ್ಲಿ (ಅಧಿಕೃತ ದಾಖಲೆಯ ಪ್ರಕಾರ) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ಯಾವುದೇ ಆಟಗಾರನು ಈ ಸಾಧನೆಯನ್ನು ಮಾಡಿಲ್ಲ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!