ಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ನಿಧನ
ಮಂಗಳೂರು: ಹಿರಿಯ ಸಾಹಿತಿ ಅಮೃತ ಸೋಮೇಶ್ವರ ನಿಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ ವಿದ್ವಾಂಸರು, ಕನ್ನಡ, ತುಳು ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜಮುಖಿ ಚಂತನೆಯುಳ್ಳ ಡಾ. ಅಮೃತ ಸೋಮೇಶ್ವರ ಅವರು ನಿಧನರಾಗಿದ್ದಾರೆ. 89 ವರ್ಷ ಬಾಳಿ ಬದುಕಿದ್ದ ಸಾಹಿತ್ಯ ಕೊಂಡಿ ಕಳಚಿಬಿದ್ದಿದೆ. 

ಅಮೃತ ಸೋಮೇಶ್ವರರು ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ಎಂಬಲ್ಲಿ 27.09.1935ರಂದು ಜನಿಸಿದರು. ಇವರ ತಂದೆ ಮುಂಬೈಯಲ್ಲಿ ಜರ್ಮನ್ ರಾಯಭಾರಿ ಕಚೇರಿಯ ಒಬ್ಬ ಅಧಿಕಾರಿಯ ವಾಹನ ಚಾಲಕರಾಗಿದ್ದರು. ಇವರು ಶಾಲಾ ಶಿಕ್ಷಣ ಪಡೆದಿರದಿದ್ದರೂ, ಕುತೂಹಲ ಮತ್ತು ಸ್ವಪ್ರಯತ್ನದಿಂದ 12 ಭಾಷೆಗಳನ್ನು ಕಲಿತಿದ್ದರು. ಅಮೃತರ ತಾಯಿ ಗೃಹಿಣಿಯಾಗಿದ್ದರೂ, ಮಲೆಯಾಳ ಜನಪದ ಕಥನ ಕಾವ್ಯಗಳನ್ನು ಹಾಡಬಲ್ಲವರಾಗಿದ್ದರು. ಅಮೃತರಿಗಿಂತ ಮೂರು ವರ್ಷ ಹಿರಿಯರಾದ ಅವರ ಅಕ್ಕ ಕಮಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು.

ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅಮೃತರು, ಐದು ವರ್ಷವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದರು. ಅಲ್ಲಿ 5ನೇ ತರಗತಿ ವರೆಗೆ ಕಲಿತು, 1946ರಲ್ಲಿ ಆಗ ತಾನೇ ಆರಂಭವಾದ ಆನಂದಾಶ್ರಮ ಪ್ರೌಢಶಾಲೆಯ 6ನೇ ತರಗತಿಗೆ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಸೇರಿದರು. 1954ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾದರು.

ತಮ್ಮ ಪ್ರೌಢಶಾಲಾ ವ್ಯಾಸಂಗದ ಅವಧಿಯಲ್ಲಿ ಅಮೃತರ ಸಾಹಿತ್ಯಾಸಕ್ತಿ ಬೆಳೆಯಿತು. ಇದಕ್ಕೆ ಪ್ರೋತ್ಸಾಹ ಕೊಟ್ಟವರು ಗುರುಗಳಾದ ಅಮ್ಮೆಂಬಳ ಶಂಕರನಾರಾಯಣ ನಾವಡರು. ಪ್ರೌಢಶಾಲಾ ದಿನಗಳಲ್ಲೇ ಅಮೃತರು ಬರೆದ ಒಂದು ಕವನ, ಚಿತ್ರಗುಪ್ತ ಪತ್ರಿಕೆಯಲ್ಲಿ ಪ್ರಕಟವಾಯಿತು. 9ನೇ ತರಗತಿಯಲ್ಲಿರುವಾಗ ಅವರು ಶ್ರೀಮತೀ ಪರಿಣಯ ಎಂಬ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದರು. ಕಥೆ, ಕವನ, ಪ್ರಬಂಧ, ನಾಟಕ ಮತ್ತು ಯಕ್ಷಗಾನ ಪ್ರಸಂಗವನ್ನೊಳಗೊ0ಡ ಪಂಚಾಮೃತ ಎಂಬ ಕೈ ಬರಹದ ಒಂದು ಪುಸ್ತಕವನ್ನು ಕೂಡಾ ಅವರು ಆ ದಿನಗಳಲ್ಲಿ ಬರೆದಿದ್ದರು. ಎಸೆಸೆಲ್ಸಿ ಯಲ್ಲಿರುವಾಗ ಅವರೇ ಬರೆದ ತನಿಯ ಗುರುವರ ಕಾಳಗ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವೂ ಶಾಲೆಯಲ್ಲಿ ನಡೆದಿತ್ತು. 

ಕೇಟೆಕಾರಿನ ಸ್ಟೆಲ್ಲ ಮೇರಿಸ್ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅನಂತರ ಇಲ್ಲಿನ ಆನಂದಾಶ್ರಮದಲ್ಲಿ ಪ್ರೌಢಶಾಲೆ ವಿಧ್ಯಾಭ್ಯಾಸ ಮಾಡಿದರು. ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದರು. 1967ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ 1993ರಲ್ಲಿ ನಿವ್ರತ್ತರಾದರು. ನಿವ್ರತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಅಮ್ರತರು ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವರು. ಅವರ ಮೊದಲ ಕ್ರತಿ 'ಎಲೆಗಿಳಿ' ಎಂಬ ಸಣ್ಣಕತೆಗಳ ಸoಕಲನ 1957ರಲ್ಲಿ ಪ್ರಕಟವಾಯಿತು. ರುದ್ರಶಿಲೆ ಸಾಕ್ಷಿ , ಕೆಂಪು ನೆನಪು ಅವರ ಇನ್ನೆರಡು ಸಂಕಲನಗಳು ಪ್ರಕಟವಾದವು. ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ, ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು 'ತಂಬಿಲ', 'ರಂಗಿತ' ಕವನ ಸಂಗ್ರಹ, 'ಗೋಂದೋಲ್', 'ರಾಯ ರಾವುತೆ' ಮೊದಲಾದ ನಾಟಕಗಳನ್ನು ಪ್ರಕಟಿಸಿದವರು. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದು.

ಇವರ ನಿಧನಕ್ಕೆ ಗಣ್ಯಾತಿ ಗಣ್ಯರು ಸೇರಿದಂತೆ ಸಹಸ್ರ ವಿದ್ಯಾರ್ಥಿ ಬಳಗ, ಕುಟುಂಬಸ್ಥರು, ಸಹೃದಯಿ ಬಂಧುಗಳು ಕಂಬನಿ ಮಿಡಿದಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!