ಸುಬ್ರಹ್ಮಣ್ಯ: ಸಮಯಪ್ರಜ್ಞೆ ಮೆರೆದ ಬೀದಿ ಶ್ವಾನ..! ಪುಟ್ಟ ಕಂದಮ್ಮ ಅಪಾಯದಿಂದ ಪಾರು
ನಾಗರಹಾವಿನಿಂದ ಮಗುವನ್ನು ರಕ್ಷಿಸಿದ ಕರಿಯ

ನಾಯಿಯ ನಿಷ್ಠೆ ನಿಜಕ್ಕೂ ಮೂಕ ವಿಸ್ಮಿತ. ಅವುಗಳು ತೋರುವ ನಿಷ್ಕಲ್ಮಷ ಪ್ರೀತಿ ಭಾವುಕರನ್ನಾಗಿಸುತ್ತದೆ. ತಮ್ಮವರ ಪ್ರಾಣ ರಕ್ಷಿಸಲು ಶ್ವಾನಗಳು ಹಿಂದು ಮುಂದು ಯೋಚಿಸುವುದಿಲ್ಲ. ಇಲ್ಲೊಂದು ಬೀದಿ ನಾಯಿ ಪುಟ್ಟ ಮಗುವಿನ ಪ್ರಾಣ ಉಳಿಸಿದೆ. 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂತಹದೊ0ದು ಅಚ್ಚರಿಯ ಘಟನೆ ನಡೆದಿದೆ. ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯೊಬ್ಬರ ಮಗುವನ್ನು ಬೀದಿ ನಾಯಿಯೊಂದು ಹಾವಿನಿಂದ ರಕ್ಷಿಸಿದ್ದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಆದಿ ಸುಬ್ರಹ್ಮಣ್ಯಕ್ಕೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿ ಮಾಡಲು ತೆರಳಿದ್ದರು. ಈ ವೇಳೆ ಮಗುವು ರಸ್ತೆ ಬದಿಗೆ ಬಂದಿದೆ. ಇದೇ ಸಂದರ್ಭ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ರಸ್ತೆ ಬದಿಗೆ ಬಂದಿದ್ದ ಮಗು ಹಾವನ್ನು ತುಳಿಯುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಕರಿಯ ಓಡಿ ಹೋಗಿ ಮಗುವಿಗೆ ಅಡ್ಡ ನಿಂತಿದೆ. ಮಗುವು ಹಾವನ್ನು ತುಳಿಯದಂತೆ, ಹಾವು ರಸ್ತೆ ದಾಟಲು ಅವಕಾಶ ಮಾಡಿಕೊಟ್ಟು ಮಗುವನ್ನು ಪ್ರಾಣಾಪಾಯದಿಂದ ಕಾಪಾಡಿದೆ.

ಈ ಘಟನೆಯನ್ನ ಕಂಡ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಇನ್ನು ಈ ಕುರಿತ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬೀದಿ ಶ್ವಾನ ಕರಿಯ ಮಗುವನ್ನು ರಕ್ಷಸಿದ್ದು ನಿಜಕ್ಕೂ ಪವಾಡ ಎಂದು ಹಲವರು ಪ್ರತಿಕ್ರಿಯಿಸಿದ್ದರೆ, ಕೆಲವರು ನಾಯಿನಿಷ್ಠೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!