ಮೂಲ್ಕಿ: ಚಿಪ್ಪು ಹೆಕ್ಕಲು ಹೋದ ಯುವಕರ ತಂಡ: ಓರ್ವ ನೀರುಪಾಲು, ಇಬ್ಬರ ರಕ್ಷಣೆ
ಮೂಲ್ಕಿ: ಚಿಪ್ಪು ಹೆಕ್ಕಲು ಹೋದ ಯುವಕರ ತಂಡ: ಓರ್ವ ನೀರುಪಾಲು, ಇಬ್ಬರ ರಕ್ಷಣೆ

ಮಂಗಳೂರು: ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಚಿಪ್ಪು ಹೆಕ್ಕಲು ಹೋದ ಯುವಕರ ತಂಡದಲ್ಲಿ ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ.

 ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ ಚಿಪ್ಪು ಹೆಕ್ಕಲು ಬಂದಿದ್ದರು. ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಷ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್‌ರವರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಷ್ ಪತ್ತೆಯಾಗಿಲ್ಲ.

ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್‌ಡಿಆರ್‌ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!