ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ -  ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಡಾ.ಹರೀಶ್ ಆಚಾರ್ಯ ಕಣಕ್ಕೆ.!
ವಿಧಾನ ಪರಿಷತ್ ಚುನಾವಣೆ ಅಖಾಢ
ಬಿಜೆಪಿ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ

ಮಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬೆನ್ನಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಗೆ ಅಖಾಢ ಸಿದ್ಧವಾಗಿದೆ. ಆರು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಪಕ್ಷಗಳಿಂದ ಈಗಾಗಲೇ ಅಭ್ಯರ್ಥಿಗಳ ಘೋಷಣೆಯಾಗಿದೆ. ಅದರಲ್ಲೂ ಬಿಜೆಪಿ ಪ್ರಾಬಲ್ಯ ಹೊಂದಿರುವ ಕರಾವಳಿ ಭಾಗಕ್ಕೆ ಈ ಬಾರಿ ಪ್ರಾತಿನಿಧ್ಯ ಸಿಗದಿರುವುದು ಸಹಜವಾಗಿಯೇ ಹಲವರ ಹುಬ್ಬೇರಿಸಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಈ ಬಾರಿ ಕರಾವಳಿ ಪ್ರದೇಶದ ಅಭ್ಯರ್ಥಿಗಳಾರೂ ಕಣದಲ್ಲಿಲ್ಲ. ಇದು ಸಹಜವಾಗಿ ಹಲವರಲ್ಲಿ ನಿರಾಸೆ ತರಿಸಿದೆ. ಪರಿಷತ್ ನಲ್ಲಿ ಕರಾವಳಿ ಭಾಗದ ಶಿಕ್ಷಕರ ಧ್ವನಿ ಯಾಗಬಲ್ಲ ಸೂಕ್ತ ಅಭ್ಯರ್ಥಿಯಾಗಿ ಸಹಕಾರ ಭಾರತಿಯ ಮುಖಂಡ ಶಿಕ್ಷಣ ಕ್ಷೇತ್ರದಲ್ಲಿ ಒಡನಾಟ ಹೊಂದಿರುವ, ಈಗಾಗಲೇ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿರುವ ಡಾ.ಎಸ್.ಆರ್.ಹರೀಶ್ ಆಚಾರ್ಯ ಅವರನ್ನು‌ ಕಣಕ್ಕಿಳಿಸಲು ಶಿಕ್ಷಕರ ಗುಂಪು ಸಿದ್ದವಾಗಿದೆ.

ನೈಋತ್ಯ ಶಿಕ್ಷಕರ ಕ್ಷೇತ್ರ ದೀರ್ಘಕಾಲದಿಂದ ಬಿಜೆಪಿ ಹಿಡಿತದಲ್ಲಿ ಇದ್ದು ಇಲ್ಲಿ 1994ರಿಂದ 2018ರ ತನಕ ಬಿಜೆಪಿ ಪ್ರತಿನಿಧಿಯೇ ಇದ್ದರು. ಬಾಲಕೃಷ್ಣ ಭಟ್ ಎರಡು ಬಾರಿ ಅನಂತರ ಎರಡು ಬಾರಿ ಕ್ಯಾ.ಗಣೇಶ್ ಕಾರ್ಣಿಕ್ ಬಿಜೆಪಿಯಿಂದ ವಿಜಯ ಪತಾಕೆ ಹಾರಿಸಿದ್ದರು. 2018 ರಲ್ಲಿ ಈ ಕ್ಷೇತ್ರ ಮೊದಲ ಸಲ‌ ಜೆಡಿಎಸ್ ಪಾಲಾಯಿತು. ಜೆಡಿಎಸ್ ಅಭ್ಯರ್ಥಿ ಚಿಕ್ಕಮಗಳೂರು ಮೂಲದ ಎಸ್.ಎಲ್. ಭೋಜೇಗೌಡ ಬಿಜೆಪಿಯ ಗಣೇಶ್ ಕಾರ್ಣಿಕ್ ಹಾಗೂ ಕಾಂಗ್ರೆಸ್ ನ ಕೆ.ಕೆ.ಮಂಜುನಾಥ್ ರನ್ನು ಸೋಲಿಸಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಈ ಬಾರಿ ಇದೇ ಭೋಜೇಗೌಡ ಬಿಜೆಪಿ- ಜೆಡಿಎಸ್ ನ ಮೈತ್ರಿ ಅಭ್ಯರ್ಥಿ. ಇದು‌ ಹಲವರಲ್ಲಿ ಅಸಮಾಧಾನ ಉಂಟು ಮಾಡಿದ್ದು ಜೆಡಿಎಸ್ ನ ಇತ್ತೀಚೆಗಿನ ಮುಜುಗರದ ವಿಷಯ ಮುಂದೆ ಇರುವಾಗ ಆ ಪಕ್ಷದ ಅಭ್ಯರ್ಥಿ ಪರವಾಗಿ ಮತ ಕೇಳುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ. ಅದರಲ್ಲೂ ಪ್ರಜ್ಞಾವಂತ ಶಿಕ್ಷಕರ ಬಳಿ ಮೈತ್ರಿ ಅಭ್ಯರ್ಥಿಯ ಪರ ಮತ ಕೇಳುವಾಗ ಜೆಡಿಎಸ್ ನ ಪೆನ್ ಡ್ರೈವ್ ವಿಷಯ ಕೇಳಿದರೆ ಆ ಮುಜುಗರದಿಂದ ಪಾರಾಗುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಅದರ ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಭಾಗದ ಶಿಕ್ಷಕ ಕ್ಷೇತ್ರದ ಮತದಾರರ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಬಲ್ಲವರು ಯಾರು ಎಂಬ ಪ್ರಶ್ನೆಗೆ ಡಾ.ಹರೀಶ್ ಆಚಾರ್ಯ ಎಂಬ ಉತ್ತರ ಲಭಿಸಿದೆ. ಆದ ಕಾರಣ ಹರೀಶ್ ಆಚಾರ್ಯ ಅವರ ಸ್ಪರ್ಧೆಗೆ ಒಲವು ಹೆಚ್ಚಿದೆ. ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮರ್ಥ ವಾದ ಮಂಡಿಸಬಲ್ಲ ಛಾತಿ ಹರೀಶ್ ಆಚಾರ್ಯ ಅವರ ಬಳಿ ಇರುವುದನ್ನು  ಶಿಕ್ಷಕ ವರ್ಗ ಮನದಟ್ಟು ಮಾಡಿಕೊಂಡಿದೆ.

ಕಾಲೇಜು ಜೀವನದಲ್ಲಿ ಎಬಿವಿಪಿ ನಾಯಕರಾಗಿ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿದ್ಯಾರ್ಥಿಗಳ‌ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಿದ್ದ, ಹೋರಾಟಗಳನ್ನು ಸಂಘಟಿಸುತ್ತಿದ್ದ, ಮುಂದೆ ಸಹಕಾರ ಭಾರತಿಯ ಮುಖಂಡರಾಗಿ‌ ಸಹಕಾರ ಕ್ಷೇತ್ರದಲ್ಲೂ ವಿಶೇಷ ಛಾಪನ್ನೊತ್ತಿ, ಅದೇ ಕ್ಷೇತ್ರದ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಡಾ.ಹರೀಶ್ ಆಚಾರ್ಯ ತಮ್ಮ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಎಂದು ಶಿಕ್ಷಕರ ಒಂದು ವರ್ಗ ಅವರನ್ನೇ ಅಭ್ಯರ್ಥಿಯಾಗಿಸಲು ಮುಂದಾಗಿದೆ. ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ನೈಋತ್ಯ ಶಿಕ್ಷಕರ ಕ್ಷೇತ್ರದ ಎಲ್ಲ ಜಿಲ್ಲೆಗಳ ಶಿಕ್ಷಕರ ಒಲವು ಗಳಿಸಬಲ್ಲರು. ಹೀಗಾದರೆ ವಿಧಾನ ಪರಿಷತ್ತಿನಲ್ಲಿ ಸಮರ್ಥ ವಿಚಾರಗಳ ಮಂಡನೆ ಸಾಧ್ಯವಾಗಬಹುದು ಎನ್ನಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!