ಮದ್ಯ ದರ ಮತ್ತೆ ಏರಿಕೆ: ಎಣ್ಣೆ ಹೊಡೆಯುವ ಮುಂಚೆನೇ ಕಿಕ್ ಏರಿಸಲು ಮುಂದಾದ ರಾಜ್ಯ ಸರ್ಕಾರ
ಮದ್ಯ ಪ್ರಿಯರಿಗೆ ಮತ್ತಷ್ಟು ನಶೆ
ದೇಶೀಯ ಮದ್ಯದ ಬೆಲೆ ಹೆಚ್ಚಿಸಲು ನಿರ್ಧರಿಸಿದ ರಾಜ್ಯ ಸರ್ಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದೆ. ಉಚಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿರುವ ಸರ್ಕಾರ, ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್ಪ್ಯಾಬ್‌ಗಳ ಅಗ್ಗದ ಮದ್ಯಗಳ ಬೆಲೆ ತುಂಬಾ ಕಡಿಮೆಯಿದೆ. ರಾಜ್ಯದಲ್ಲಿ ಸೆಮಿ ಪ್ರೀಮಿಯಂ ಹಾಗೂ ಪ್ರೀಮಿಯಂ ವಿದೇಶಿ ಮದ್ಯಕ್ಕೆ ಹೋಲಿಸಿದರೆ ಅಗ್ಗದ ಬೆಲೆಯ ಮದ್ಯಗಳ ಮಾರಾಟ ಹೆಚ್ಚಿದೆ ಹೀಗಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ.

ಅಬಕಾರಿ ಇಲಾಖೆಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲೂ ಅಗ್ಗದ ಮದ್ಯಗಳು ಸಿಂಹಪಾಲು ಹೊಂದಿವೆ. ಈಗ ರಾಜ್ಯದಲ್ಲಿ 2023ರ ಜುಲೈನಲ್ಲಿ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲಾಗಿತ್ತು. ನಂತರ ಲಿಕ್ಕರ್ ಕಂಪನಿಗಳು ಬಿಯರ್ ದರ ಏರಿಕೆ ಮಾಡಿದವು. ನಂತರ ಜನ ಸಾಮಾನ್ಯರು ಬಳಕೆ ಮಾಡುವ ಲಿಕ್ಕರ್ ದರವನ್ನ 20 ರೂಪಾಯಿಗೆ ಏರಿಕೆ ಮಾಡಿತ್ತು. ಈಗ ಮತ್ತೆ ಲಿಕ್ಕರ್ ದರ ಏರಿಕೆಗೆ ಅಬಕಾರಿ ಇಲಾಖೆ ಪ್ಲಾನ್ ಮಾಡಿದ್ದು, ಸರ್ಕಾರ ಚುನಾವಣೆ ನಂತರ ಅನುಮೋದನೆ ನೀಡಲಿದೆಯಂತೆ.

ಈ ಬಗ್ಗೆ ಮಾತಾನಾಡಿದ ಮದ್ಯ ಮಾರಾಟಗಾರರು, ಅಧಿಕೃತವಾಗಿ ದರ ಏರಿಕೆಯ ಆದೇಶ ಇನ್ನೂ ಆಗಿಲ್ಲ. ಆದರೆ ದರ ಏರಿಕೆ ಮಾಡುವ ಬಗ್ಗೆ ಮಾತುಗಳು ಕೇಳಿ ಬರ್ತಿವೆ ಎಂದು ರಾಮಕೃಷ್ಣ ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರು ಹೇಳಿದರು. ಹೊರ ರಾಜ್ಯಗಳಲ್ಲಿ ದುಬಾರಿ ಮದ್ಯಗಳ ಬೆಲೆ ಕರ್ನಾಟಕಕ್ಕಿಂತಲೂ ಕಡಿಮೆ ಇದೆ. ಈ ಮದ್ಯಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಇವುಗಳ ಬೆಲೆ ಇಳಿಕೆ ಮಾಡಲಿದೆ. 6-12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಶೇ10ರಷ್ಟು, 12-18ನೇ ಸ್ಪ್ಯಾಬ್‌ವರೆಗಿನ ವಿದೇಶಿ ಅಥವಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಶೇ12-15ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ. ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿ ಮಾಡಲಾಗುತ್ತದೆ. 

2023ರ ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೂರು ಬಾರಿ ಬಿಯರ್‌ ದರ ಹೆಚ್ಚಳ ಮಾಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಯರ್‌ ಮೇಲೆ ಶೇ20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ. ವರೆಗೆ ದರ ಹೆಚ್ಚಿಸಿದ್ದವು. ಇದರ ಬೆನ್ನಲ್ಲೇ ಸರಕಾರ ಫೆ.1ರಿಂದ ಜಾರಿಗೆ ಬರುವಂತೆ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ 185 ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ಎಇಡಿ ಶೇ 10ರಷ್ಟು ಹೆಚ್ಚಳವಾಗಿತ್ತು. ಇದೀಗ ಮತ್ತೆ ದರ ಏರಿಕೆ ಆಗಲಿದೆ. ಇದಕ್ಕೆ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಏನೋ ತನ್ನ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪದೇ ಪದೇ ದರ ಏರಿಕೆ ಮಾಡುತ್ತಿದೆ. ಆದರೆ ಇದಕ್ಕೆ ಮದ್ಯಪ್ರಿಯರು ಮಾತ್ರ ತೀರ ಗರಂ ಆಗಿದ್ದು, ಮಧ್ಯಮ ವರ್ಗದವರು ಕುಡಿಯುವ ಮದ್ಯವನ್ನ ಎಷ್ಟು ಬಾರಿ ಏರಿಕೆ ‌ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!