ಮಂಗಳೂರು: ಇದು ರಸ್ತೆಯೋ.. ಕೆಸರು ಗದ್ದೆಯೋ.!!
ಬಿಜೈ ನ್ಯೂ ರೋಡ್ ನಾಗರಿಕರಿಂದ "ಕೆಸರಡೊಂಜಿ ದಿನ"

ಮಂಗಳೂರು: ಅಯ್ಯೋ ಇದು ರಸ್ತೆಯೋ... ಕೆಸರಿನ ಗದ್ದೆಯೋ ಎಂದು ಜನರು ಫುಲ್ ಕನ್ಫೂಸ್ ಆಗುತ್ತಿರುವ ಘಟನೆ ಮಂಗಳೂರಿನ ಬಿಜೈ ನ್ಯೂ ರೋಡ್ ನ ಭಾರತ್ ಮಾತಾ ಸರ್ಕಲ್ ರಸ್ತೆಯಲ್ಲಿ ಕಾಣಬಹುದು. ಹೌದು ರಸ್ತೆಯ ಅವ್ಯವಸ್ಥೆಯಿಂದ ಪ್ರಯಾಣಿಕರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿದೆ. 

ಬಿಜೈ ನ್ಯೂ ರೋಡ್ ನ ಭಾರತ್ ಮಾತಾ ಸರ್ಕಲ್ ಬಳಿ ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ಆಕ್ರೋಶಗೊಂಡ ನಾಗರಿಕರು “ಕೆಸರಡೊಂಜಿ” ಎನ್ನುವ ಫ್ಲೆಕ್ಸ್ ಅಳವಡಿಸಿದ್ದಾರೆ.

ಕಳೆದ ನಾಲ್ಕೈದು ತಿಂಗಳುಗಳಿಂದ ಬಿಜೈ ನ್ಯೂ ರೋಡ್ ನ ಭಾರತ್ ಮಾತಾ ಸರ್ಕಲ್ ಬಳಿ ಸರ್ಕಲ್ ಗೆ ಕಾಂಕ್ರೀಟ್ ಹಾಗೂ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಬಿಜೈ ನ್ಯೂ ರೋಡಿಗೆ ಮುಖ್ಯ ರಸ್ತೆಯಾಗಿರುವುದರಿಂದ ಭಾರತ್ ಮಾತಾ ಜಂಕ್ಷನ್ ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಜನರಿಗೆ ದಿನನಿತ್ಯದ ಓಡಾಟಕ್ಕೆ ಕಷ್ಟವಾಗಿತ್ತು, ಈ ನಡುವೆ ಮಳೆಗಾಲ ಆರಂಭವಾಗಿದ್ದು ಕಾಮಗಾರಿ ನಡೆಯುತ್ತಿದ್ದ ಭಾರತ್ ಮಾತಾ ಸರ್ಕಲ್ ಸಂಪೂರ್ಣವಾಗಿ ಕೆಸರುಮಯವಾಗಿದೆ.

ಇದರಿಂದ ಶಾಲಾ ಕಾಲೇಜು ಹೋಗುವ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಈ ರಸ್ತೆಯಲ್ಲಿ ಓಡಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾಮಗಾರಿಯಿಂದ ಆಕ್ರೋಶಗೊಂಡಿರುವ ನಾಗರಿಕರು ಭಾರತ್ ಮಾತಾ ಸರ್ಕಲ್ ಬಳಿ 'ಬಿಜೈ ರೋಡ್ ಭಾರತ್ ಮಾತಾ ಸರ್ಕಲ್ ಕೆಸರಡೊಂಜಿ ದಿನ' ಎನ್ನುವ ಫ್ಲೆಕ್ಸ್ ಅಳವಡಿಸಿದ್ದಾರೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೋ ಕಾದು ನೋಡಬೇಕಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!