ಮಂಗಳೂರು: ಪ್ರಿನ್ಸೆಸ್‌ ಮಿರಾಲ್‌ ನೌಕೆ ಮುಳುಗಡೆ - ತೈಲ ತೆರವು ಕಾರ್ಯ ಶುರು
ಪ್ರಿನ್ಸೆಸ್‌ ಮಿರಾಲ್‌ ನೌಕೆ ಮುಳುಗಡೆ - ತೈಲ ತೆರವು ಕಾರ್ಯ ಶುರು

ಮಂಗಳೂರು: ಉಳ್ಳಾಲದ ಬಟ್ಟಪಾಡಿ ಬಳಿ ಮುಳುಗಿ ಮಾಲಿನ್ಯದ ಆತಂಕಕ್ಕೆ ಕಾರಣವಾಗಿದ್ದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಹೊರ ತೆಗೆಯುವ ಕಾರ್ಯ ಆರಂಭಗೊಂಡಿದೆ. ಸೋಮವಾರ ಸುಮಾರು 30 ಟನ್‌ ಡೀಸೆಲ್‌ ಹೊರ ತೆಗೆಯಲಾಯಿತು.

ತೈಲ ಹೊರ ತೆಗೆಯುವ ಕಾರ್ಯಕ್ಕೆ ಗುಜರಾತ್ ಮೂಲದ ಬನ್ಸಲ್ ಎಂಡೆವರ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇದಕ್ಕಾಗಿ ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಕಳೆದ ಒಂದು ವಾರದಿಂದ ತಯಾರಿ ಕಾರ್ಯ ನಡೆಸಲಾಗಿತ್ತು. ಸೋಮವಾರದಿಂದ ಕೆಲಸ ಆರಂಭಿಸಲಾಯಿತು.

ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್‌ ತೂಕದ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ಈ ಹಡಗು 2021ರ ಜೂನ್‌ 21ರಂದು ಬಟ್ಟಪಾಡಿ ಬಳಿ ಅಪಾಯಕ್ಕೆ ಸಿಲುಕಿತ್ತು. ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡು ನೀರು ಒಳ ಸೇರಲಾರಂಭಿಸಿದ್ದರಿಂದ ಹಡಗು ಮುಕ್ಕಾಲು ಭಾಗ ಮುಳುಗಡೆಯಾಗಿತ್ತು. ಹಡಗಿನಲ್ಲಿದ್ದ 15 ಮಂದಿ ಸಿರಿಯನ್ ನಾವಿಕರನ್ನು ಕೋಸ್ಟ್ ಗಾರ್ಡ್ ಸಿಬಂದಿ ರಕ್ಷಿಸಿದ್ದರು. ಇನ್ನು ಹಡಗು ಚಲಿಸುವ ಸ್ಥಿತಿಯಲ್ಲಿ ಇಲ್ಲದಿದ್ದುದರಿಂದ ಸಮುದ್ರ ಮಧ್ಯೆಯೇ ಬಾಕಿಯಾಗಿರುವುದರಿಂದ ಅದರಲ್ಲಿದ್ದ ತೈಲ ಸೋರಿಕೆಯಾಗಿ ಜಲ ಮಾಲಿನ್ಯದ ಆತಂಕ ಎದುರಾಗಿತ್ತು. 160 ಟನ್‌ ಫರ್ನೆಸ್‌ ಆಯಿಲ್‌, 60 ಟನ್‌ ಡೀಸೆಲ್‌ ಸೇರಿದಂತೆ 220 ಟನ್‌ ತೈಲ ಹಡಗಿನಲ್ಲಿತ್ತು.

ಸದ್ಯ ಹೋಸ್‌ಪೈಪ್ ಅಳವಡಿಕೆ ಮಾಡಿ ವ್ಯಾಕ್ಯೂ ಪಂಪ್ ಮೂಲಕ ತೈಲವನ್ನು ಹೊರ ತೆಗೆದು 320 ಟನ್‌ ಸಾಮರ್ಥ್ಯದ ಬಂಕರ್‌ ಬಾರ್ಜ್‌ಗೆ ವರ್ಗಾಯಿಸಿ ಬಳಿಕ ಹಳೆ ಬಂದರಿಗೆ ಅದನ್ನು ತರುವ ಕೆಲಸ ನಡೆಯಲಿದೆ. ಬಳಿಕ ಪುನರ್ಬಳಕೆ ಉದ್ದೇಶಕ್ಕಾಗಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್‌ ಇಲಾಖೆ ಮತ್ತು ಕೋಸ್ಟ್‌ಗಾರ್ಡ್‌ನಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆದುಕೊಳ್ಳಲಾಗಿದ್ದು, ಇದೀಗ ತೈಲ ಹೊರ ತೆಗೆಯುವ ಕಾರ್ಯ ಆರಂಭಗೊಂಡಿದೆ. ಇದು ಪೂರ್ಣಗೊಳ್ಳಲು ಸುಮಾರು 15 ದಿನ ಬೇಕಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!