‘ವಿಶ್ವಕಪ್ ಟ್ರೋಫಿಗೆ ಅಗೌರವ ತೋರಿಲ್ಲ, ಮುಂದೆಯೂ ಹೀಗೆ ಮಾಡುವೆ’; ಮತ್ತೆ ಉದ್ಧಟತನದ ಹೇಳಿಕೆ ನೀಡಿದ ಮಾರ್ಷ್
‘ವಿಶ್ವಕಪ್ ಟ್ರೋಫಿಗೆ ಅಗೌರವ ತೋರಿಲ್ಲ, ಮುಂದೆಯೂ ಹೀಗೆ ಮಾಡುವೆ’; ಮತ್ತೆ ಉದ್ಧಟತನದ ಹೇಳಿಕೆ ನೀಡಿದ ಮಾರ್ಷ್

2023ರ ಏಕದಿನ ವಿಶ್ವಕಪ್‌ನ  ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ) ದಾಖಲೆಯ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಟೀಂ ಇಂಡಿಯಾವನ್ನು ಅದರ ತಾಯ್ನಾಡಿನಲ್ಲೇ ಮಣಿಸಿದ್ದ ಕಾಂಗರೂಗಳು ಮೈದಾನದಲ್ಲಿ ಹುಚ್ಚೆದು ಕುಣಿದು ಸಂಭ್ರಮಿಸಿದ್ದರು. ಆ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲೂ ಸಂಭ್ರಮಾಚರಣೆ ಮುಂದುವರೆದಿತ್ತು.

ಈ ವೇಳೆ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ಡ್ರೆಸ್ಸಿಂಗ್ ರೂಂನಲ್ಲಿ ಕೈಯಲ್ಲಿ ಬಿಯರ್ ಹಿಡಿದು, ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸಿದ್ದರು. ಮಿಚೆಲ್ ಮಾರ್ಷ್ ಅವರ ಈ ನಡವಳಿಕೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಆ ಬಳಿಕ ಮಾರ್ಷ್​ ನಡೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದೀಗ ಮಿಚೆಲ್ ಮಾರ್ಷ್ ತಮ್ಮ ಆ ನಡವಳಿಕೆಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 

ಸಾಕಷ್ಟು ಪರ ವಿರೋದದ ಚರ್ಚೆಯ ನಡುವೆ ಇದೇ ಮೊದಲ ಬಾರಿಗೆ ತನ್ನ ನಡವಳಿಕೆಯ ಬಗ್ಗೆ ಮಾತನಾಡಿರುವ ಮಾರ್ಷ್​, ‘ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುವ ಮೂಲಕ ತಾನು ಯಾವುದೇ ಅಗೌರವ ಎಸಗಿಲ್ಲ’ ಎಂದಿದ್ದಾರೆ. ಹಾಗೆಯೇ ಮುಂದೆಯೂ ಈ ರೀತಿಯ ಕೃತ್ಯವನ್ನು ಎಸಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾರ್ಷ್​, ‘ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಹುಶಃ ಹಾದು, ಮುಂದೆಯೂ ಹೀಗೆ ಮಾಡುತ್ತೇನೆ’ ಎಂದು ಉತ್ತರಿಸಿದ್ದಾರೆ.

ಆಸ್ಟ್ರೇಲಿಯನ್ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಷ್​, ‘ಆ ಫೋಟೋದಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ನಾನು ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಇದನ್ನು ಗಮನಿಸಿದವರು ನೀವು ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿದ್ದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ ಎಂದು ನನಗೆ ಹೇಳಿದ್ದರು. ಅದು ಮುಗಿದು ಹೋದ ಅಧ್ಯಾಯ. ಆದರೆ, ಆ ಫೋಟೋದಲ್ಲಿ ಅಂಥದ್ದೇನೂ ಇರಲಿಲ್ಲ’ ಎಂದು ಮಾರ್ಷ್​ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!