ರಾಜಕೀಯಕ್ಕೆ ಗುಡ್ ಬೈ ಹೇಳಿದ ರಮಾನಾಥ ರೈ.!

ಚುನಾವಣಾ ರಾಜಕೀಯದಿಂದ ನಿವೃತ್ತಿ, ಪಕ್ಷದ ಕೆಲಸದಲ್ಲಿ ಸಕ್ರಿಯ - ರೈ ಘೋಷಣೆ

ಮಂಗಳೂರು: ಬಂಟ್ವಾಳದಲ್ಲಿ ಸೋಲಿನ ಬೆನ್ನಲ್ಲೇ ಇದೀಗ ಮಾಜಿ ಸಚಿವ ಕಾಂಗ್ರೇಸ್ ನ ಹಿರಿಯ ಮುಖಂಡ ರಮಾನಾಥ ರೈ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳದಲ್ಲಿ ಕಳೆದ ಬಾರಿಗಿಂತ ಈ ಬಾರಿ ನನಗೆ ಹೆಚ್ಚು ಮತಗಳು ಬಿದ್ದಿವೆ, ಆದರೆ ಸೋಲಾಗಿದೆ.

ಈ ಬಗ್ಗೆ ಅವಲೋಕನ ನಡೆಸುತ್ತೇವೆ ಎಂದರು. ನಾನೆಂದೂ ಪಕ್ಷದ ಮಾತನ್ನು ಮೀರಿಲ್ಲ. ಇನ್ನು ಮುಂದೆಯೂ ಪಕ್ಷ ನೀಡುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದವರು ತಿಳಿಸಿದ್ದಾರೆ.

ಇದು ನನ್ನ ಕೊನೆಯ ಚುನಾವಣೆ. ನಾನು ಸೋತರೂ ಗೆದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತೇನೆ . ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾದರೂ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವೆ. ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರು ಕಾಂಗ್ರೆಸ್‌ನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸವಿದೆ” ಎಂದು ರೈ ಹೇಳಿದ್ದಾರೆ.