ಉಡುಪಿ: ಗಾಂಜಾ ಮಾರಾಟ- ಆರೋಪಿಗಳಿಗೆ 2 ವರ್ಷಗಳ ಕಠಿಣ ಶಿಕ್ಷೆ

ಗಾಂಜಾ ಮಾರಾಟ ಪ್ರಕರಣ - ಇಬ್ಬರು ಆರೋಪಿಗಳಿಗೆ 2 ವರ್ಷಗಳ ಕಠಿಣ ಶಿಕ್ಷೆ

ಉಡುಪಿ: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000ರೂ. ದಂಡ ವಿಧಿಸಿದೆ.

ಹೈದರಬಾದ್ ಮೂಲದ ಮಪಾಲ ಸರಳೇಬೆಟ್ಟು ನಿವಾಸಿ ತಿಪಿರ್ ನೇನಿ ಆದಿತ್ಯ(21) ಹಾಗೂ ತೆಲಂಗಣ ರಾಜ್ಯದ ಖಾನಪುರಂ ಮೂಲದ ಮಪಾಲ ಈಶ್ವರನಗರ ನಿವಾಸಿ ಮೊಗಿಲಿ ಹೇಮಂತ್ ರೆಡ್ಡಿ(20) ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು.

2019ರ ಅ.27ರಂದು ಉಡುಪಿ ನಗರದ ಶಂಕರನಾರಾಯಣ ದೇವಸ್ಥಾನದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇವರಿಬ್ಬರನ್ನು ಜಿಲ್ಲಾ ಸೆನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದರು. ಇವರಿಂದ 4ಕೆ.ಜಿ. 034ಗ್ರಾಂ ತೂಕದ ಗಾಂಜಾ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಇನ್ನು ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ. ಪ್ರಕರಣದ ತನಿಖೆ ನಡೆಸಿದ್ದು, ನಂತರ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಎಫ್‌ಎಸ್‌ಎಲ್ ವರದಿಯನ್ನು ಸ್ವೀಕರಿಸಿ ಆರೋಪಿಗಳ ವಿರುದ್ಧ ಅಲ್ಟೋಬರ್ 13ರಂದು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಇಬ್ಬರು ಆರೋಪಿಗಳಿಗೆ ಎರಡು ವರ್ಷ ಕಠಿಣ ಜೈಲುಶಿಕ್ಷೆ ಮತ್ತು ತಲಾ 50ಸಾವಿರ ರೂ. ದಂಡ ಹಾಗೂ ದಂಡ ವಿಧಿಸಿದ್ದು, ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.