ಉಪ್ಪಿನಂಗಡಿ: ಕರಿಮಣಿ ಕಟ್ಟಲು ನಿರಾಕರಿಸಿದ ವಧು..! ಮುರಿದು ಬಿದ್ದ ಮದುವೆ

ಕೊನೆ ಕ್ಷಣದಲ್ಲಿ ವರಸೆ ಬದಲಿಸಿದ ಮದುಮಗಳು..! ಮದ್ವೆ ಬೇಡ ಅಂದಿದ್ದೇಕೆ?
ಪೊಲೀಸ್ ಠಾಣೆಗೆ ಕರೆದೊಯ್ದಾಗ ಬೇಕಾಯಿತು ಮದುವೆ - ಬೇಡವೆಂದ ವರ

ಉಪ್ಪಿನಂಗಡಿ: ತಾಳಿ ಕಟ್ಟುವ ಸಮಯದಲ್ಲಿಯೇ ವಧು ಮದುವೆಗೆ ನಿರಾಕರಿಸಿದ ಘಟನೆ ನಡೆದಿದೆ, ಈ ಕಾರಣದ ಲಕ್ಷಾಂತರ ಖರ್ಚು ಮಾಡಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೆಂಟರಿಷ್ಟರ ಮಧ್ಯೆ ವರನಿಗೆ ಶಾಕ್ ಕೊಟ್ಟಿದ್ದಾಳೆ ಮದುಮಗಳು. ಈ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.

ಕೊಣಾಲು ಗ್ರಾಮದ ಕೋಲ್ಪೆ ದಿ ಬಾಬು ಗೌಡ ಅವರ ಪುತ್ರ ಉಮೇಶ ಅವರ ಮದುವೆಯು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ ಕೊರಗಪ್ಪ ಗೌಡ ಅವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಎ.26 ರಂದು ಬೆಳಗ್ಗೆ 11.35ರ ಮೂಹೂರ್ತದಲ್ಲಿ ಕಾಂಚನ ಪೆರ್ಲದ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ಮದುವೆಯ ದಿಬ್ಬಣದಲ್ಲಿ ಬಂದಿದ್ದರು. ವಧು ದಾರೆ ಸೀರೆ ಹಾಕಿ ಪರಸ್ಪರ ಹೂಮಾಲೆ ಕೂಡ ಹಾಕಿದ್ದರು. ಆದರೆ ತಾಳಿ ಕಟ್ಟಲು ಮುಂದಾದಗ ನನಗೆ ಈ ಮದುವೆ ಇಷ್ಟ ವಿಲ್ಲ ಎಂದು ವಧು ಹೇಳಿದ್ದಾಳೆ.

ಇದರಿಂದ ಎರಡೂ ಕಡೆಯವರು ಕಂಗಾಲಾಗಿ ವಧುವಿನ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ವಧು ಯಾವುದಕ್ಕೂ ಸೊಪ್ಪು ಹಾಕದೆ ತನ್ನ ಹಠ ಹಿಡಿದಿದ್ದಾಳೆ. ಅಷ್ಟು ಮಾತ್ರವಲ್ಲದೆ ನಿರಾಕರಣೆಗೆ ಸ್ಪಷ್ಟ ಕಾರಣವೂ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ಎರಡೂ ಕಡೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. 

ಔತಣ ಕೂಟಕ್ಕೆ ಸಿದ್ಧತೆ:

ವರನ ಮನೆಯಲ್ಲಿ ಮಧ್ಯಾಹ್ನದ ಔತಣ ಕೂಟಕ್ಕೆ ಸುಮಾರು 500 ಜನರಿಗೆ ಮಾಂಸಾಹಾರಿ ಊಟ ತಯಾರಾಗಿತ್ತು. 1 ಸಾವಿರದಷ್ಟು ಐಸ್‌ಕ್ರೀಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಮದುವೆ ಮುರಿದು ಬಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮತ್ತೆ ಮದುವೆಯಾಗಲು ಒಪ್ಪಿದ ವಧು:

ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಮತ್ತೆ ಮದುವೆ ಆಗಲು ಒಪ್ಪಿದ್ದರು. ಆದರೆ ಆಗ ವರ ಉಮೇಶ್ ಅವರು ಮದುವೆ ಆಗಲು ನಿರಾಕರಿಸಿದರು. ಇದರಿಂದಾಗಿ ಎರಡೂ ಕಡೆಯವರು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಯಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.