ಕಾರ್ಕಳ: ಪರಶುರಾಮ ಮೂರ್ತಿ ವಿವಾದ: ರಾಜಕೀಯ ನಿವೃತ್ತಿಯ ಬಗ್ಗೆ ಶಾಸಕ ಸುನಿಲ್ ಕಿಡಿ

ಕಾರ್ಕಳ: ಪರಶುರಾಮ ಮೂರ್ತಿ ವಿವಾದ: ರಾಜಕೀಯ ನಿವೃತ್ತಿಯ ಬಗ್ಗೆ ಶಾಸಕ ಸುನಿಲ್ ಕಿಡಿ

ಬೈಲೂರು-ಎರ್ಲಪ್ಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಿದ ಪರಶುರಾಮ ಮೂರ್ತಿ ಈಗ ವಿವಾದ ಕೇಂದ್ರ ಆಗಿದೆ. ಈ ಮೂರ್ತಿ ಅಸಲಿಯೋ ನಕಲಿಯೋ ಎಂಬ ವಿವಾದ ಈಗ ತಾರಕಕ್ಕೇರಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಶಾಸಕ ಸುನೀಲ್ ಕುಮಾರ್ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. 

ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನೀಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ನಡೆಯಲಿ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿ ಅದನ್ನು ಜನರ ಮನದಲ್ಲಿ ಅಚ್ಚೊತ್ತುವಂತೆ ಮಾಡಿಕೊಂಡಿದ್ದಾರೆ. ಸ್ಥಾಪಿಸಿದ ಪರಶುರಾಮನ ಮೂರ್ತಿ ನಕಲಿಯಾದಲ್ಲಿ ಸುನೀಲ್ ಕುಮಾರ್ ಅವರು ಗೌರವನ್ವಿತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದಲೇ ನಿವೃತ್ತಿ ಹೊಂದಲು ತಯಾರಾಗಿದ್ದಾರೆಯೇ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸವಾಲು ಹಾಕಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರದ ಜನತೆ ನನಗೆ ಸೇವೆ ಮಾಡಲು, ಒಳಿತಾಗುವಂತಹ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಯೇ ವಿನ; ರಾಜಿನಾಮೆ ನೀಡುವುದಕ್ಕೆ ಅಲ್ಲ ಎಂದು ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರ ಸವಾಲಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವೊಬ್ಬ ಅವಕಾಶವಾದಿ ರಾಜಕಾರಣಿ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದು ಅಲ್ಲಿಯ ಪ್ರಯೋಜನ ಅನುಭವಿಸಿ ಬಳಿಕ ರಾಜೀನಾಮೆ ನೀಡಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಲಾಭ ಪಡೆದವರು. ಕಾಂಗ್ರೆಸ್ಸಿನ ರಾಜೀನಾಮೆ ಯಾರ ಲಾಭಕ್ಕಾಗಿ ಮಾಡಿದ್ದೀರಿ? ನಿಮ್ಮ ಸ್ವಂತಕೋಸ್ಕರವಲ್ಲವೇ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ರಾಜಕೀಯ ನಿವೃತ್ತಿಯ ನಿಮ್ಮ ಮಾತು ಎಷ್ಟು ಕಪಟ ಎನ್ನುವುದು ಗೊತ್ತಿದೆ. ಕಳೆದ ಎರಡು ವರುಷಗಳ ಹಿಂದೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿಕೊಂಡು ರಾಜ್ಯದೆಲ್ಲೆಡೆ ಯಾರಿಂದೆಲ್ಲಾ ಎಷ್ಟೆಷ್ಟು ಹಣ ಸಂಗ್ರಹಿಸಿದ್ದೀರಿ ಎನ್ನುವುದು ತಿಳಿದಿದೆ. ನೀವು ಇಚ್ಛೆಪಟ್ಟಲ್ಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ನಾನು ಸಿದ್ಧನಿದ್ದೇನೆ. ನಿಮ್ಮ ರಾಜಿನಾಮೆ, ರಾಜಕೀಯ ನಿವೃತ್ತಿ ಇವೆರಡು ಕೂಡ ನಿಮ್ಮ ಲಾಭಕೋಸ್ಕರವಲ್ಲದೆ ಸಾರ್ವಜನಿಕವಾಗಿ ಇದರಿಂದ ಏನು ಪ್ರಯೋಜನವಿಲ್ಲ ಎಂದು ಸುನಿಲ್ ಕುಮಾರ್ ತಿರುಗೇಟು ನೀಡಿದರು.

ಈ ಬಗ್ಗೆ ತನಿಖೆ ನಡೆಯಲಿ

ಪರಶುರಾಮ ಥೀಂ ಪಾರ್ಕ್ ನ ವಿಗ್ರಹ ಗುಣಮಟ್ಟದ ಕೊರತೆ ಆಗಿದ್ದರೆ ಜಿಲ್ಲಾಧಿಕಾರಿ ಕ್ರಮವಹಿಸುತ್ತಾರೆ. ತನಿಖೆಗೆ ಒಪ್ಪಿಸುತ್ತಾರೆ. ಯಾವ ರೀತಿಯ ತನಿಖೆ ಬೇಕಾದರೂ ನಡೆಯಲಿ. ಅದಕ್ಕೆ ನನ್ನ ಸಹಮತವಿದೆ. ಅದರ ಗುತ್ತಿಗೆದಾರ ನಾನಲ್ಲ. ಗುಣಮಟ್ಟದಲ್ಲಿ ಲೋಪವಾದರೇ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಕ್ಷೆಗೆ ಒಳಪಡಿಸಲಿ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಯಾವ ರೀತಿ ತನಿಖೆ ನಡೆಯುತ್ತದೆ ಎನ್ನುವ ಕನಿಷ್ಠ ಜ್ಞಾನ ಗುತ್ತಿಗೆದಾರನಾದ ನಿಮಗೆ ಇರಬೇಕಲ್ಲವೇ  ಎಂದು ಸುನಿಲ್ ಕುಮಾರ್ ತೀಕ್ಷವಾಗಿ ಪ್ರತ್ಯುತ್ತರ ನೀಡಿದರು.