ಮಂಗಳೂರು: ಬ್ರಿಜೇಶ್ ಚೌಟ ಹೆಸರಿನಲ್ಲಿ ನಕಲಿ ಜಾತಿಪತ್ರ ವೈರಲ್, ಬಿಜೆಪಿಯಿಂದ ಆಯೋಗಕ್ಕೆ ದೂರು

ಬಂಟ ಬ್ರಿಗೇಡ್..! ಜಾತಿ ಆಧರಿಸಿ ಮತಯಾಚನಾ ಪತ್ರ ವೈರಲ್
ಕಾಂಗ್ರೆಸ್‌ನಿಂದ ಇದೆಂತಾ ಹುನ್ನಾರ?

ಮಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿ ಇದ್ದು, ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೆಸರಿನಲ್ಲಿ ಜಾತಿ ಪತ್ರವೊಂದು ವೈರಲಾಗಿದೆ. ಇದು ಕಾಂಗ್ರೆಸ್‌ನ ಹುನ್ನಾರ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜತೆಗೆ, ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದೆ. ನಕಲಿ ಪತ್ರ ಹರಿಯಬಿಟ್ಟು ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಸೋಲೊಪ್ಪಿಕೊಂಡಿದೆ ಎಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು. ಹೀಗಾಗಿ ಬಂಟ ಬ್ರಿಗೇಡ್ ಹೆಸರಿನಲ್ಲಿ ಜಾತಿ ಪತ್ರವನ್ನು ವೈರಲ್ ಮಾಡಲಾಗಿದೆ.

ವೈರಲ್ ಆಗಿರುವ ಪತ್ರದಲ್ಲಿ ಏನಿದೆ?

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಬಂಟ ಸಮುದಾಯದವರು. ನಮ್ಮ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಿ. ಇತರ ಶೂದ್ರ ಸಮುದಾಯಗಳು ಮೆರೆಯದಂತೆ ನೋಡಿಕೊಳ್ಳಿ ಎಂದು ವೈರಲ್ ಆದ ಪತ್ರದಲ್ಲಿದೆ. ಬಿಲ್ಲವ ಸಮುದಾಯವನ್ನು ಟಾರ್ಗೆಟ್ ಮಾಡಿ ಪತ್ರ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಬಿಲ್ಲವ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿ ಹಿಂದೂ ನಾಯಕ ಸತ್ಯಜಿತ್ ಸುರತ್ಕಲ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಅವರು ಜಾತಿ ನೆಲೆಯಲ್ಲಿ ಅಭ್ಯರ್ಥಿಗಳನ್ನು ಬೆಂಬಲಿಸೋಣ ಎಂದು ಸಮುದಾಯದವರಿಗೆ ಇತ್ತೀಚೆಗೆ ಕರೆ ನೀಡಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪದ್ಮರಾಜ್ ಅವರನ್ನು ಬೆಂಬಲಿಸೋಣ, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೆಲ್ಲಿಸೋಣ. ನಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಮತ ನೀಡೋಣ ಎಂದು ಅವರು ಬೆಂಬಲಿಗರಿಗೆ ಕರೆ ನೀಡಿದ್ದು ಇತ್ತೀಚಿಗೆ ಸುದ್ದಿಯಾಗಿತ್ತು. ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆಯೂ ಅವರು, ಕಾಂಗ್ರೆಸ್ ಪರ ಮತಯಾನೆ ಮಾಡಿದ್ದರು ಎಂದು ಬಿಜೆಪಿಯ ಕೆಲವು ನಾಯಕರು ದೂರಿದ್ದರು.