ಕರಾವಳಿಯಲ್ಲಿ ಮೈ ಕೊರೆಯುವ ಚಳಿ - ಇನ್ನಷ್ಟು ಹೆಚ್ಚಳವಾಗಲಿದೆ

ಕರಾವಳಿಯಲ್ಲಿ ಮೈ ಕೊರೆಯುವ ಚಳಿ - ಇನ್ನಷ್ಟು ಹೆಚ್ಚಳವಾಗಲಿದೆ

ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ತೀವ್ರಗೊಂಡಿದೆ. ರವಿವಾರ, ಸೋಮವಾರ ಬೆಳಗ್ಗೆ ಭಾರೀ ಚಳಿ ಹಾಗೂ ಮಂಜುನಿಂದ ಕೂಡಿದ ವಾತಾವರಣವಿತ್ತು.

ಗ್ರಾಮಾಂತರ ಭಾಗಗಳಲ್ಲಿ ಚಳಿ ಹೆಚ್ಚಿದ್ದು, ಬಿಸಿಲು ಆವರಿಸುವವರೆಗೂ ಮೈ ಕೊರೆಯುವ ಚಳಿ ಇತ್ತೀಚೆಗೆ ಜಾಸ್ತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಮುಂತಾದ ಕಡೆಗಳಲ್ಲಿ ಬೆಳಗ್ಗೆ ಬಿಸಿಲು ಆವರಿಸಿದರೂ ಚಳಿ ಕಡಿಮೆಯಾಗುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ನಗರಗಳಲ್ಲಿಯೂ ಬೆಳಗ್ಗಿನ ಹೊತ್ತು ಭಾರೀ ಚಳಿಯಿಂದ ಕೂಡಿದ ವಾತಾವರಣ ಇರುತ್ತದೆ. ರಾತ್ರಿ ವೇಳೆಯೂ ಕರಾವಳಿಯಲ್ಲಿ ಚಳಿ ಹೆಚ್ಚಿರುತ್ತದೆ.

ರವಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 31.3 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ಇದು ವಾಡಿಕೆಗಿಂತ 2 ಡಿ.ಸೆ. ಕಡಿಮೆ ಪ್ರಮಾಣ. ಅಲ್ಲದೆ ಕನಿಷ್ಠ ತಾಪಮಾನ 21.5 ಡಿ.ಸೆ. ಇತ್ತು. ಪಣಂಬೂರಿನಲ್ಲಿ ಗರಿಷ್ಠ ತಾಪಮಾನ 32.6 ಡಿ.ಸೆ. ಇದ್ದರೆ, ಕನಿಷ್ಠ ತಾಪಮಾನ 20.5 ಡಿ.ಸೆ. ಇತ್ತು. ವಾಡಿಕೆಗಿಂತ ಒಂದು ಡಿ.ಸೆ. ಕಡಿಮೆ ತಾಪಮಾನ ಇದಾಗಿತ್ತು. ಸೋಮವಾರದ ತಾಪಮಾನ ಮಾಹಿತಿ ಲಭ್ಯವಾಗಿಲ್ಲ.

ದಕ್ಷಿಣ ಒಳನಾಡಿನಲ್ಲಿ ಶೀತಗಾಳಿ ಇನ್ನಷ್ಟು ಜೋರಾಗಲಿದ್ದು, ಚಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.