ಮಂಗಳೂರು: ಚುನಾವಣಾ ಸಂದರ್ಭ ಕರ್ತವ್ಯ ಲೋಪ - ಪಿ.ಯು. ಉಪನಿರ್ದೇಶಕ ಅಮಾನತು

ದ.ಕ. ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಣ್ಣ ಅಮಾನತು

ಮಂಗಳೂರು : ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ತಮ್ಮ ಹುದ್ದೆಯಿಂದ ಅಮಾನತುಗೊಂಡಿದ್ದಾರೆ. ಇತ್ತೀಚಿಗೆ ನಡೆದ ಚುನಾವಣಾ ಕರ್ತವ್ಯದ ವೇಳೆ ಲೋಪ ಎಸಗಿದ್ದಾರೆ ಎನ್ನುವುದು ಅವರ ವಿರುದ್ಧ ಇರುವ ಆರೋಪ. ಈ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಮಾನತು ಆದೇಶ ಹೊರಡಿಸಿದ್ದಾರೆ.

ಮೇ 9ರಂದು ಜಿಲ್ಲಾ ಚುನಾವಣಾಧಿಕಾರಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವಂತೆ ಡಿಡಿಪಿಯು ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಅವರು ಗೈರಾಗಿದ್ದರು. ಈ ಬಗ್ಗೆ ನೋಟೀಸ್‌ ನೀಡಲಾಗಿತ್ತು. ಅದಕ್ಕೆ ನೀಡಿದ ಉತ್ತರ ಸಮಾಧಾನ ತರಲಿಲ್ಲ ಎಂಬ ನೆಲೆಯಿಂದ ಡಿಡಿಪಿಯು ಅವರನ್ನು ಅಮಾನತುಗೊಳಿಸಲಾಗಿದೆ. ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಅವರನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ. ಮೇ 22ರಂದು ಜಯಣ್ಣ ಮತ್ತೆ ಲಿಖೀತ ಉತ್ತರ ನೀಡಿದ್ದು, ನನ್ನ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸುವುದಾಗಿ ಉಲ್ಲೇಖೀಸಿದ್ದಾರೆ.