ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಕಾಶ್ಮೀರದಲ್ಲಿ ಪಾವಂಜೆ ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನ
ಕಾಶ್ಮೀರದಲ್ಲಿ ಐತಿಹಾಸಿಕ ಯಕ್ಷಗಾನ ಪ್ರದರ್ಶನ: ಲೆಫ್ಟಿನೆಂಟ್‌ ಗವರ್ನರ್‌ ಮೆಚ್ಚುಗೆ, ನವರಾತ್ರಿಗೆ ವೈಷ್ಣೋದೇವಿ ಮಂದಿರಕ್ಕೆ ಬರುವಂತೆ ಆಹ್ವಾನ

ಕಾಶ್ಮೀರದಲ್ಲಿ ಯಕ್ಷಗಾನದ ಚಂಡೆ ಸದ್ದು ಕೇಳಿ ಬಂದಿದೆ. ಕರಾವಳಿಯ ಗಂಡುಕಲೆ ಯಕ್ಷಗಾನ ಇದೀಗ ಕಾಶ್ಮೀರದಲ್ಲೂ ಪ್ರದರ್ಶನ ಕಂಡಿದೆ. ಯಕ್ಷಗಾನವನ್ನು ವೀಕ್ಷಿಸಿದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮ ನಡೆಯಿತು.

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶಿಸಿದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಿದ ಲೆ.ಗವರ್ನರ್‌ ಸಿನ್ಹಾ, ಕಲೆ ಸಮಾಜವನ್ನು ಒಗ್ಗೂಡಿಸುತ್ತದೆ. ಸಮಾಜ ಜಾಗೃತಗೊಂಡಾಗ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶದ ವೈವಿಧ್ಯಮಯ ಕಲೆಗಳು ಈ ಕೆಲಸ ಮಾಡುತ್ತಿವೆ.

ನಮ್ಮ ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಅವರು ಗಾಂಧಿ ಜಯಂತಿಗೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಗೆ ನೀಡಿದೆ. ಈ ಯಕ್ಷಗಾನ ಕಾರ್ಯಕ್ರಮ ಜಮ್ಮು-ಕಾಶ್ಮೀರದ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ. ಹೀಗಾಗಿ, ನವರಾತ್ರಿ ವೇಳೆ ನಿಮ್ಮ ತಂಡ ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ಮತ್ತೊಮ್ಮೆ ಇದೇ ಪ್ರದರ್ಶನ ನೀಡಬೇಕು ಎಂದು ಆಹ್ವಾನ ನೀಡಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!