ಮಂಗಳೂರು ದಸರಾ ಸಂದರ್ಭ ಮೂಲ ಸೌಕರ್ಯಕ್ಕೆ ಆದ್ಯತೆ: ವೇದವ್ಯಾಸ ಕಾಮತ್
ಮಂಗಳೂರು ದಸರಾ ವಿದ್ಯುದ್ದೀಪಾಲಂಕಾರ ಖರ್ಚು ಪಾಲಿಕೆ ನೀಡಲಿದೆ : ಶಾಸಕ ಕಾಮತ್

ಮಂಗಳೂರು  : ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ನವೀಕರಣದ ರೂವಾರಿ ಗೌರವಾನ್ವಿತ ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ದಸರಾ ಸಂದರ್ಭದಲ್ಲಿ ಈ ಬಾರಿಯೂ ಸಹ ಕಳೆದ ವರ್ಷಗಳಂತೆ ಪಾಲಿಕೆ ವತಿಯಿಂದಲೇ 1.30 ಕೋಟಿ ರೂ ವೆಚ್ಚದಲ್ಲಿ ನಗರಕ್ಕೆ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಮಂಗಳೂರಿನ ಪ್ರತಿಷ್ಠಿತ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುವ ದಸರಾ ಉತ್ಸವವು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಬೇಕೆಂಬ ಉದ್ದೇಶದಿಂದ ಕ್ಷೇತ್ರದ ಮುಂದಾಳುಗಳು, ಮಹಾನಗರ ಪಾಲಿಕೆ ಆಡಳಿತ ಪಕ್ಷದವರು, ವಿರೋಧ ಪಕ್ಷದವರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಒಟ್ಟಾಗಿ ಸೇರಿಕೊಂಡು ಈ ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದು, ಕಳೆದ ಮೂರು ವರ್ಷಗಳಿಂದ ಅಂದರೆ ಹಿಂದಿನ ಮೇಯರ್ ದಿವಾಕರ್ ಪಾಂಡೇಶ್ವರ ಅವರ ಅವಧಿಯಲ್ಲಿ ಆರಂಭವಾದ ದಸರಾ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೇ ಬೀದಿಬದಿ ವಿದ್ಯುದ್ದೀಪಾಲಂಕಾರದ ವ್ಯವಸ್ಥೆಯನ್ನು ನಂತರ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಪ್ರಸ್ತುತ ಸುಧೀರ್ ಶೆಟ್ಟಿ ಕಣ್ಣೂರು ಮುಂದುವರೆಸಿದ್ದಾರೆ ಎಂದರು.

ಕ್ಷೇತ್ರದ ಒಳಗಡೆ ಕ್ಷೇತ್ರದ ಆಡಳಿತ ಮಂಡಳಿಯೇ ದೀಪಾಲಂಕಾರವನ್ನು ಮಾಡಲಿದ್ದು, ಕ್ಷೇತ್ರದ ಹೊರಗಡೆ ಬೀದಿಬದಿಯ ವಿದ್ಯುದ್ದೀಪಾಲಂಕಾರದ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯು ವಹಿಸಿಕೊಂಡಿದ್ದು, ಕುದ್ರೋಳಿ ಮಾತ್ರವಲ್ಲದೇ, ಮಂಗಳಾದೇವಿ, ಬೋಳಾರ ಮಾರಿಗುಡಿ, ಉರ್ವ ಮಾರಿಗುಡಿ, ಭಗವತಿ ದೇವಸ್ಥಾನ, ಸೂಟರ್ ಪೇಟೆ, ವೆಂಕಟರಮಣ ದೇವಸ್ಥಾನ ಹೀಗೆ ನಗರದ ಬಹುತೇಕ ಎಲ್ಲಾ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಮುಂಭಾಗದ ಪ್ರಮುಖ ರಸ್ತೆ, ದೇವರ ಉತ್ಸವ ಸಾಗುವ ಮಾರ್ಗಕ್ಕೆ ವಿದ್ಯುದ್ದೀಪಾಲಂಕಾರದ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಯಾವುದೇ ದೇವಸ್ಥಾನಗಳು ಬೇಡಿಕೆ ಇಟ್ಟಿಲ್ಲವಾದರೂ ಮಂಗಳೂರು ದಸರಾ ಉತ್ಸವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಕೂಡ ಭಾಗಿಯಾಗಬೇಕು ಎಂಬ ದೃಷ್ಟಿಯಲ್ಲಿ ಹಲವು ಚಿಂತನೆಗಳನ್ನು ರೂಪಿಸಿಕೊಂಡು ಯೋಜನೆಗಳನ್ನು ಹಾಕಿಕೊಂಡು ಕೈಗೆತ್ತಿಕೊಂಡಿದ್ದೇವೆ. ಉಳಿದಂತೆ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ನಿರ್ವಹಣೆ, ಪೇಂಟಿಂಗ್, ತಾತ್ಕಾಲಿಕ ಶೌಚಾಲಯ, ಇನ್ನಿತರ ವ್ಯವಸ್ಥೆಗಳ ಬಗ್ಗೆ ಆಡಳಿತ ಮಂಡಳಿಯವರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಿದ್ದಾರೆ.

ಇದು ತಾತ್ಕಾಲಿಕವಲ್ಲದ ಶಾಶ್ವತವಾದ ಯೋಜನೆಯಾಗಿರುತ್ತದೆ. ಹಾಗಾಗಿಯೇ ಮುಂದಿನ ಬಾರಿಯಿಂದ ಮಹಾನಗರ ಪಾಲಿಕೆ ಬಜೆಟ್ ನಲ್ಲಿಯೇ ಮಂಗಳೂರು ದಸರಾ ಉತ್ಸವದ ವಿದ್ಯುದ್ದೀಪಾಲಂಕಾರದ ವ್ಯವಸ್ಥೆಗಾಗಿಯೇ ಅನುದಾನ ಮೀಸಲಿಡುವ ಬಗ್ಗೆ ಚಿಂತಿಸಲಾಗಿದೆ. ಅಂತೆಯೇ ಪ್ರತಿ ವರ್ಷವೂ ಮಂಗಳೂರು ದಸರಾ ಉತ್ಸವ ವಿಜೃಂಭಣೆಯಿಂದ ಆಚರಣೆಯಾಗಲಿ ಎಂಬ ಅಭಿಲಾಷೆ ನಮ್ಮದು ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಸಾಯಿರಾಮ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರ್, ಪದ್ಮರಾಜ್.ಆರ್, ಮಾಜಿ ಮೇಯರ್ ಗಳಾದ ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ಶಶಿಧರ್ ಹೆಗ್ಡೆ ಉಪಮೇಯರ್ ಸುನಿತಾ, ಪೂರ್ಣಿಮಾ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರ ಪ್ರವೀಣ್ ಚಂದ್ರ ಆಳ್ವ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!