ಮೂಡಬಿದಿರೆ: ಪಾಲಡ್ಕದಲ್ಲಿ ಮತ್ತೆ ಶುರುವಾಯ್ತು ಗಣಿಗಾರಿಕೆ.!
ಪ್ರಕೃತಿ ನಾಶ ಮಾಡಿ ದುಡ್ಡು ಮಾಡುವ ದಂಧೆ

ಮೂಡಬಿದಿರೆಯ ಪಾಲಡ್ಕದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಮತ್ತೆ ರಾಜಾರೋಷವಾಗಿ ಆರಂಭಗೊಂಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ನಮ್ಮ ತಂಡ ಲೀಸ್ ಪಡೆಯದೆ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ವಿಸ್ಕೃತ ವರದಿ ಪ್ರಕಟಿಸಿದ್ದೆವು. ಇದರಿಂದ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಕೆಂಪು ಕಲ್ಲಿನ ಗಣಿಗಾರಿಕೆ ಶುರುವಾಗಿದೆ. 

ಅನುಮತಿ ಪಡೆಯದೆ ಅಕ್ರಮ..!

ಮೂಡಬಿದಿರೆಯ ಪಾಲಡ್ಕದ ಸರ್ವೇ ನಂಬರ್ 96, ರಿಚರ್ಡ್ ಕುಟಿನ್ಹಾ ಎಂಬವರಿಗೆ ಸೇರಿದ ಜಾಗದಲ್ಲಿ ಸತೀಶ್ ಅಮೀನ್ ಎಂಬಾತ ಯಾವುದೇ ಲೀಸ್ ಪಡೆಯದೆ ಅಕ್ರಮಕ್ಕೆ ಕೈ ಹಾಕಿದ್ದಾನೆ. ಯಾರ ಅಧಿಕಾರಿಗಳ ಭಯವೂ ಇಲ್ಲದೆ, ಎಗ್ಗಿಲ್ಲದೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಆರಾಮವಾಗಿ ದುಡ್ಡು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ. 

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!

ಇನ್ನು ಕೆಲವು ತಿಂಗಳ ಹಿಂದಷ್ಟೇ ಇದೇ ಅಕ್ರಮದ ಬಗ್ಗೆ ಅಧಿಕಾರಿಗಳ ಗಮನಕ್ಕೆ ಸ್ವತಃ ನಮ್ಮ ತಂಡವೇ ಜಾಗಕ್ಕೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆಗ ಸ್ಥಳಕ್ಕೆ ಕರೆದಾಗ ಬಾರದೇ ಇದ್ದು, ಅಕ್ರಮದ ಬಗ್ಗೆ ವಿವರ ಕೇಳಿದಾಗ ಅಸಡ್ಡೆಯ ಉತ್ತರ ನೀಡಿದ್ದರು. ಆದರೆ ವರದಿ ಪ್ರಕಟಿಸಿದ ನಂತರ ಎಚ್ಚೆತ್ತುಕೊಂಡು ಅಕ್ರಮಕ್ಕೆ ಬ್ರೇಕ್ ಹಾಕಿದ್ದರು. ಆದರೆ ಮತ್ತೆ ಅದೇ ಜಾಗದಲ್ಲಿ ಅಕ್ರಮ ನಡೆಯುತ್ತಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವಲ್ಲದೆ ಇನ್ನೇನು.?

ಶಾಮೀಲಾಗಿದ್ದಾರಾ ಅಧಿಕಾರಿಗಳು.!

ಯಾವುದೇ ಅಕ್ರಮಕ್ಕೆ ಬ್ರೇಕ್ ಬಿದ್ದ ಬಳಿಕ ಅದು ಮತ್ತೆ ಶುರುವಾಗುವುದಿಲ್ಲ. ಆದರೆ ನಾಲ್ಕು ತಿಂಗಳ ಹಿಂದೆ ಅಧಿಕಾರಿಗಳು ಇದಕ್ಕೆ ಬ್ರೇಕ್ ಹಾಕಿದ್ದು, ಈಗ ಹೇಗೆ  ಮತ್ತೆ ಪ್ರಾರಂಭಿಸಿದರು. ಇದರಲ್ಲಿ ಅಧಿಕಾರಿಗಳ ಶಾಮೀಲು ಇದೆಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ದಿನ ಕಳೆದಂತೆ ಪರಿಸರಲ್ಲಿನ ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲದೆ ಸುಂದರವಾದ ಪ್ರಕೃತಿ ಕೂಡ ನಶಿಸಿ ಹೋಗುತ್ತಿದೆ. ಈ ರೀತಿಯ ಅಕ್ರಮಕ್ಕೆ ತಕ್ಷಣ ಬ್ರೇಕ್ ಬೀಳಬೇಕು. ಗಣಿಗಾರಿಕೆ ಹಾವಳಿಯಿಂದ ಪ್ರಕೃತಿ ಜೊತೆಗೆ ಅನಾಹುತಗಳು ಸಂಭವಿಸುತ್ತಿದೆ. ಲೀಸ್ ಪಡೆಯದೆ ಕೆಂಪು ಕಲ್ಲು ಗಣಿಗಾರಿಕೆ ನಡೆಸಿ ಸಿಕ್ಕಿ ಬಿದ್ದ ಬಳಿಕವೂ ರಾಜರೋಷವಾಗಿ ನಡೆಯುತ್ತಿರುವುದು ಹಲವು ಆತಂಕಕ್ಕೆ ಕಾರಣವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!