"ಕಾಂಗ್ರೆಸ್ ಡೇಂಜರ್" ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
"ಕಾಂಗ್ರೆಸ್ ಡೇಂಜರ್" ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ದಿನದಿಂದ ಓಲೈಕೆ, ತುಷ್ಟೀಕರಣದ ರಾಜಕಾರಣ ಮುಂದುವರೆಸಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಟೀಕಿಸಿದರು.

ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಕಾಂಗ್ರೆಸ್ ಸರಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಲೈಕೆ ಜೊತೆಗೆ ಭಯೋತ್ಪಾದಕರ ವಿಚಾರದಲ್ಲಿ ಮೃದು ಧೋರಣೆ ಈ ಸರಕಾರದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದರು.ಕಾಂಗ್ರೆಸ್ ಡೇಂಜರ್ ಪೋಸ್ಟರ್ ಇವತ್ತು ಬಿಡುಗಡೆ ಮಾಡಿದ್ದೇವೆ. ಕ್ಯೂ ಆರ್ ಕೋಡ್ ಕೊಟ್ಟಿದ್ದು, ಘಟನಾವಳಿಗಳನ್ನು ವೀಕ್ಷಿಸಬಹುದು ಎಂದರು. ನೇಹಾ ಹಿರೇಮಠದ ಹತ್ಯೆಯ ಲವ್ ಜಿಹಾದ್ ಸಂಬಂಧಿತ ಹುಬ್ಬಳ್ಳಿಯ ಘಟನೆ, ಸಿಎಂ ಹೇಳಿಕೆ, ಗೃಹ ಇಲಾಖೆ, ಕಮೀಷನರ್ ನಡವಳಿಕೆ ನೇಹಾರ ಪೋಷಕರಿಗೆ, ಕುಟುಂಬಕ್ಕಾದ ನೋವನ್ನು ಗಮನಿಸಬಹುದು. ಕಾಲೇಜಿಗೆ ಹೆಣ್ಮಕ್ಕಳು ಹೋಗಬೇಕೇ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ಸೂಚಿಸಿದರು.

ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣವನ್ನು ವೈಯಕ್ತಿಕ ಎಂದಿದ್ದರು. ಕೊನೆಗೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಕುಕ್ಕರ್ ಬಾಂಬ್ ವಿಚಾರದಲ್ಲಿ ಭಯೋತ್ಪಾದಕರನ್ನು ಸೆರೆ ಹಿಡಿದಾಗ ಅವರನ್ನು ಭಯೋತ್ಪಾದಕರೆಂದು ಕರೆಯದಂತೆ ಹೇಳಿದ್ದರು ಎಂದು ಗಮನ ಸೆಳೆದರು.ಜೈ ಶ್ರೀರಾಂ ಎಂದವರ ಮೇಲೆ ಹಲ್ಲೆ, ಹನುಮಾನ ಚಾಲೀಸ ಹಾಕಿದವರ ಮೇಲೆ ಹಲ್ಲೆ, ಮೋದಿಯವರ ಕುರಿತ ಹಾಡು ಬರೆದವರ ಮೇಲೆ ಹಲ್ಲೆ ನಡೆದಿದೆ. ಇದೆಲ್ಲಕ್ಕೂ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಟೀಕಿಸಿದರು.

ಕಾಂಗ್ರೆಸ್ಸಿನ ಮಾವೋವಾದಿ ಮಾನಸಿಕತೆ:

ಶಾಸಕ ಸುರೇಶ್‍ಕುಮಾರ್ ಅವರು ಮಾತನಾಡಿ, ಮತ ಚಲಾಯಿಸುವ ಮೊದಲು ದಯವಿಟ್ಟು ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿ. ಇಂಡಿ ಒಕ್ಕೂಟದ ಬೇರೆ ಬೇರೆ ಪಕ್ಷಗಳ ನಿಲುವನ್ನೂ ಗಮನಿಸಿ ಎಂದು ವಿನಂತಿಸಿದರು.

ಇಂಡಿ ಒಕ್ಕೂಟ, ಕಾಂಗ್ರೆಸ್ ಮತ್ತು ಈ ಒಕ್ಕೂಟದ ಪಾಲುದಾರರು ಭಾರತಕ್ಕೆ ಯಾವ ಗತಿ ತರಬಹುದು ಎಂಬುದು ಇವರ ಹೇಳಿಕೆಗಳಿಂದ ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿಯವರು ಆಗ ಜನಗಣತಿ ಮಾಡಿ ದೇಶದ ಜನಸಂಖ್ಯೆ ಆಧಾರದಲ್ಲಿ ಸಂಪತ್ತಿನ ವಿತರಣೆ ಮಾಡುತ್ತೇವೆ ಎಂದಿದ್ದರು. ಅದು ಅಸಮಾನತೆ ಸರಿಪಡಿಸಲು ಪೂರಕ ಎಂದಿದ್ದರು. ಕಷ್ಟಪಟ್ಟು ದುಡಿದವರ ಹಣವನ್ನು ಕೂಡ ಏನೂ ಕಷ್ಟಪಡದೆ ಇರುವವರಿಗೆ ಹಂಚುತ್ತೇವೆ ಎಂಬ ಮನಸ್ಥಿತಿ ಇವತ್ತು ಬಂದಿದೆ ಎಂದು ಆಕ್ಷೇಪಿಸಿದರು.ಇವರಿಗೆ ಮಾತ್ರ ದೆಹಲಿಯಲ್ಲಿ ತಾಯಿಗೊಂದು ಮನೆ, ಒಬ್ಬನೇ ಮಗನಿಗೊಂದು ಮನೆ ಬೇಕು. ಇದು ಸಂಪತ್ತಿನ ವಿತರಣೆಯೇ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು. ಇದು ಕಾಂಗ್ರೆಸ್ಸಿನೊಳಗಡೆ ಉಂಟಾಗಿರುವ ಮಾವೋವಾದಿ ಮಾನಸಿಕತೆ ಎಂದು ದೂರಿದರು. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರರಾದ ಡಾ. ನರೇಂದ್ರ ರಂಗಪ್ಪ, ಅಶೋಕ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!