ಕಿನ್ನಿಗೋಳಿ: ಬುಡಸಹಿತ ಧರೆಗುರುಳಿದ ಅವಳಿ ವೀರರನ್ನು ತೊಟ್ಟಿಲು ಕಟ್ಟಿ ತೂಗಿದ್ದ ತಾಕೊಡೆ ಮರ
ಕಾಂತಬಾರೆ - ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ
ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರ

ಕಿನ್ನಿಗೋಳಿ: ಸಹಸ್ರಮಾನದ ಇತಿಹಾಸದ, ಲಕ್ಷಾಂತರ ಮಂದಿ ನಂಬುವ ಧಾರ್ಮಿಕ ಕ್ಷೇತ್ರದ ಪವಿತ್ರ ಮರ ಬುಡಸಹಿತ ಧರೆಗುರುಳಿದ್ದು ಭಕ್ತ ಮನಸ್ಸಿನ ನೋವುಂಟು ಮಾಡಿದೆ. ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ ಬೆಳೆದು ನಿಂತಿದ್ದ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ ಶುಕ್ರವಾರ ಬುಡಸಹಿತ ಧರೆಗುರುಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡ0ತಾಗಿದೆ. ಸುಮಾರು 800ರಿಂದ 1,000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢಪಟ್ಟಿತ್ತು. 

ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿ ಕಾಂತಬಾರೆ- ಬೂದಬಾರೆಯರು ಇದ್ದರು ಅನ್ನುವುದು ಐತಿಹಾಸಿಕ ಸಾಕ್ಷಿಯಾದರೆ ಈ ಅವಳಿ ವೀರರು ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ. ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ನೇಲೆ (ಬಟ್ಟೆಯ ತೊಟ್ಟಿಲು)ಯಲ್ಲಿ ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ (ಪಡುವಣ-ಪಶ್ಚಿಮ) ಗೆಲ್ಲಿಗೆ ಎನ್ನುತ್ತದೆ ಇತಿಹಾಸ.

ಈಗ ಕಾಂತಬಾರೆ- ಬೂದಬಾರೆಯರು ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರವೇ ಬುಡ ಸಮೇತ ಉರುಳಿದೆ. ಕ್ಷೇತ್ರಕ್ಕೆ ಬರುವ ಲಕ್ಷಾಂತರ ಮಂದಿಯನ್ನು ಭಕ್ತಿ ಪರವಶರನ್ನಾಗಿ ಮಾಡಿದ್ದ ಮರ ಇನ್ನು ನೆನಪು ಮಾತ್ರವಾಗಿದೆ. ಈ ವಿದ್ಯಾಮಾನ ಭಕ್ತಗಣಕ್ಕೆ ಬೇಸರ ತರಿಸಿರುವುದು ದುರದೃಷ್ಟಕರ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!