ಧ್ವನಿಯಲ್ಲೇ ರೈಲ್ವೆ ಹಳಿ ಬಿರುಕು   ಪತ್ತೆ ಹಚ್ಚಿದ್ದರು ವಿಶ್ವೇಶ್ವರಯ್ಯ
ಇಂಜಿನಿಯರ್ ಎಂದರೆ ಒಮ್ಮೆಲೆ ಕಣ್ಮುಂದೆ ಬರುವುದು... ಮೈಸೂರು ಪೇಟ, ಕೋಟು, ಟೈ ಹಾಕಿಕೊಂಡಿರುವ ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಧ್ವನಿಯಲ್ಲೇ ರೈಲ್ವೆ ಹಳಿ ಬಿರುಕು

 ಪತ್ತೆ ಹಚ್ಚಿದ್ದರು ವಿಶ್ವೇಶ್ವರಯ್ಯ

 

 ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದಲ್ಲಿ ರಾತ್ರಿ ವೇಳೆ ನಿದ್ದೆ ಸಹಜ. ಆದರೆ ರೈಲು ಚಲಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಎಚ್ಚರವಾಯ್ತು. ನಿದ್ದೆ ಮಾಡುತ್ತಿದ್ದಲ್ಲಿಂದಲೇ ಜಿಗಿದು ಚೈನ್ ಎಳೆದರು. ರೈಲು ಸ್ವಲ್ಪ ಮುಂದೆ ಚಲಿಸಿ ನಿಂತು ಬಿಡ್ತು. ನಿದ್ದೆಯ ಮಂಪರಿನಲ್ಲೇ ಚೈನ್ ಎಳೆದಿದ್ದಾರೆ ಎಂದು ಅಂದುಕೊಂಡ ರೈಲ್ವೆ ಸಿಬ್ಬಂದಿ ಚೈನ್ ಎಳೆದದ್ಯಾಕೆ ಎಂದು ಅವರನ್ನು ಜೋರು ಮಾಡಿ ಕೇಳಿದರು. ಅವರು ಶಾಂತವಾಗಿ ಉತ್ತರಿಸಿದರು: ನಿದ್ದೆ ಮಾಡುತ್ತಿರುವಾಗಲೇ ಟ್ರ್ಯಾಕ್‌ನ ಧ್ವನಿ ಕೇಳ್ತಾ ಇದ್ದೆ. ಅದು ಕೆಲವು ಸ್ಥಳದಲ್ಲಿ ಬದಲಾಗಿತ್ತು, ಜತೆಗೆ ಕಂಪಿಸುವ ಧ್ವನಿಯೂ ಬದಲಾಗುತ್ತಿತ್ತು. ಹೀಗೆ ಬದಲಾಗಲು ಕಾರಣ ರೈಲ್ವೆ ಹಳಿಗಳ ಬಿರುಕು. ಇಲ್ಲಿಂದ ಕೆಲವು ಮೀಟರ್‌ಗಳ ಮುಂದೆ ಹಳಿಯಲ್ಲಿ ಬಿರುಕು ಇದೆ. ರೈಲು ಅದರ ಮೇಲೆ ಹೋದರೆ ಅಪಘಾತ ಸಂಭವಿಸಬಹುದು ಎಂದು ಹೇಳಿದಾಗ ಸಿಬ್ಬಂದಿ ತಬ್ಬಿಬ್ಬು. ಅವರ ಮಾತು ನಂಬದ ಸಿಬ್ಬಂದಿ ರೈಲಿನಿಂದ ಇಳಿದು ಟಾರ್ಚ್ ಸಹಾಯದಿಂದ ಟ್ರ್ಯಾಕ್ ಪರಿಶೀಲಿಸತೊಡಗಿದರು. ಆಶ್ಚರ್ಯ! ಇಂಜಿನ್ ನಿಂತ ಸ್ಥಳದಿಂದ ಕೆಲವು ಮೀಟರ್‌ಗಳ ಅಂತರದಲ್ಲೇ ಕಂಡುಬಂತು ದೊಡ್ಡ ಬಿರುಕು. ಒಂದು ವೇಳೆ ರೈಲೇನಾದರೂ ಆ ಬಿರುಕಿನ ಮೇಲೆ ಹಾದು ಹೋಗಿರುತ್ತಿದ್ದರೆ ಅಪಘಾತ ಸಂಭವಿಸುತ್ತಿತ್ತು...

 ಕೇವಲ ಶಬ್ದ ಮಾತ್ರದಿಂದಲೇ ರೈಲ್ವೆ ಹಳಿಗಳ ಬಿರುಕು ಪತ್ತೆ ಹಚ್ಚಿದ ಆ ಮಹಾನ್ ವಿಜ್ಞಾನಿ ಬೇರಾರೂ ಅಲ್ಲ, ದೇಶ ಕಂಡ ಸರ್ವಶ್ರೇಷ್ಠ ಇಂಜಿನಿಯರ್, ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು. ಇಂಥ ಶ್ರೇಷ್ಠ ವಿಜ್ಞಾನಿಯ ಜನ್ಮದಿನ ನಾಳೆ. (ಸೆಪ್ಟೆಂಬರ್ 15)

 ಇಂಜಿನಿಯರ್ ಎಂದರೆ ಒಮ್ಮೆಲೆ ಕಣ್ಮುಂದೆ ಬರುವುದು... ಮೈಸೂರು ಪೇಟ, ಕೋಟು, ಟೈ ಹಾಕಿಕೊಂಡಿರುವ ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಭಾವಚಿತ್ರ. ಇಂಜಿನಿಯರ್ ಅಂದ್ರೆ ಸರ್ ಎಂ.ವಿಶ್ವೇಶ್ವರಯ್ಯ ಅವರಂತಿರಬೇಕು ಎಂಬ ಮಾತು ಪ್ರಚಲಿತದಲ್ಲಿದೆ. ಶಿಸ್ತಿನ ಜೀವನ, ಸಮಯ ಪರಿಪಾಲನೆ, ಕರ್ತವ್ಯ ನಿಷ್ಠೆ, ಕಾರ್ಯದಕ್ಷತೆಯಲ್ಲಿ ಅವರು ಇಂದಿನ ಇಂಜಿನಿಯರ್‌ಗಳಿಗೆ ಮಾದರಿ. ಅವರ ಜನ್ಮದಿನವನ್ನು ದೇಶದಲ್ಲಿ ಇಂಜಿನಿಯರ್‌ಗಳ ದಿನ ಎಂದು ಆಚರಿಸಲಾಗುತ್ತಿದೆ.

 1861ರ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀನಿವಾಸ ಶಾಸ್ತ್ರಿ -ವೆಂಕಟಲಕ್ಷ್ಮಮ್ಮ ದಂಪತಿ ಪುತ್ರನಾಗಿ ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದರು. ಅವರ ಪೂರ್ವಜರು ಆಂಧ್ರಪ್ರದೇಶದ ‘ಮೋಕ್ಷಗುಂಡಂ’ನಿಂದ ಮುದ್ದೇನಹಳ್ಳಿಗೆ ಬಂದು ನೆಲೆಸಿದ್ದರಿಂದ ಅವರ ಹೆಸರಿನೊಂದಿಗೆ ಮೋಕ್ಷಗುಂಡಂ ಸೇರಿಕೊಂಡಿತು. ತಂದೆ ಸಂಸ್ಕೃತ ವಿದ್ವಾಂಸರಾಗಿದ್ದು, ಆಯುರ್ವೇದ ತಜ್ಞರೂ ಆಗಿದ್ದರು. ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ, ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ, ಮದ್ರಾಸ್ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮತ್ತು ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದರು.

 

 ಮುಂಬೈ ನಗರ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ವಿಶ್ವೇಶ್ವರಯ್ಯ ಅವರ ವೃತ್ತಿಜೀವನ ಆರಂಭವಾಯಿತು. 1884ರಲ್ಲಿ ನೀರಾವರಿ ಆಯೋಗದಿಂದ ಕೆಲಸಕ್ಕೆ ಆಹ್ವಾನ ಬಂತು. ಮುಂದೆ ವಿಶ್ವೇಶ್ವರಯ್ಯ ಅವರ ಖ್ಯಾತಿಯನ್ನು ಗಮನಿಸಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಂಡರು.

 

 ಸ್ವಯಂಚಾಲಿತ ಫ್ಲಡ್‌ಗೇಟ್

 ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವಲ್ಲಿ ಸರ್.ಎಂ.ವಿ ವಿಶ್ವೇಶ್ವರಯ್ಯನವರ ಪಾತ್ರ ಬಹಳ ಮುಖ್ಯವಾದುದು. ತಿರುಚಿನಾಪಳ್ಳಿಯಲ್ಲಿ ಚೋಳರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದಲ್ಲಿ ಅರ್ಥರ್ ಕಾಟನ್ ಎಂಬುವವರಿಂದ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟುಗಳನ್ನು ನೋಡಿ ವಿಶ್ವೇಶ್ವರಯ್ಯನವರು ಪ್ರಭಾವಿತರಾಗಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್‌ಗೇಟ್ ವಿನ್ಯಾಸ ಮಾಡಿ ಅದಕ್ಕೆ ಪೇಟೆಂಟ್ ಪಡೆದರು. ಪುಣೆಯ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಮೊದಲ ಬಾರಿ ಈ ಫ್ಲಡ್‌ಗೇಟ್ ನಿರ್ಮಿಸಲಾಯಿತು. ಬಳಿಕ ಗ್ವಾಲಿಯರ್‌ನ ಟಿಗ್ರಾ ಅಣೆಕಟ್ಟು, ಕೆಆರ್‌ಎಸ್‌ನಲ್ಲೂ ಇದೇ ತಂತ್ರಜ್ಞಾನ ಬಳಕೆಯಾಯಿತು.

 

 ಮೈಸೂರು ದಿವಾನರಾಗಿ ಸೇವೆ

 1924ರಲ್ಲಿ ತಮ್ಮ ನಿವೃತ್ತಿ ಬಳಿಕ ಮೈಸೂರು ಸಂಸ್ಥಾನದ ದಿವಾನರಾದರು. ಅವರು ದಿವಾನರಾಗಿದ್ದಾಗಲೇ ಮಂಡ್ಯದಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣಗೊಂಡಿತು. 1932ರಲ್ಲಿ ಅಣೆಕಟ್ಟು ಪೂರ್ಣಗೊಂಡಿತು. ಭದ್ರಾವತಿಯ ಉಕ್ಕು ಕಾರ್ಖಾನೆ, ಜೋಗದ ಜಲವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆಗಳು ವಿಶ್ವೇಶ್ವರಯ್ಯ ಅವರ ಕೊಡುಗೆಗಳು.  

 

 ಏಡನ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ

 1906ರಲ್ಲಿ ಬ್ರಿಟಿಷರ ಆಡಳಿತದಲ್ಲಿದ್ದ ಯೆಮೆನ್ ದೇಶದ ಏಡನ್ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ವಿಶ್ವೇಶ್ವರಯ್ಯ ಅವರನ್ನು ಕಳುಹಿಸಲಾಯಿತು. ಬೆಟ್ಟಗಳಿಂದ ಸುತ್ತುವರಿದ ಏಡನ್ ನಗರದಲ್ಲಿನ ಮಳೆ, ಮರಳು ಭೂಮಿಯಲ್ಲಿ ಇಂಗುತ್ತಿತ್ತು. ಅಲ್ಲಿನ ಭೂಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಸರ್.ಎಂ ವಿಶ್ವೇಶ್ವರಯ್ಯನವರು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿದರು. ದೂರದ ಗುಡ್ಡಗಾಡುಗಳಲ್ಲಿ ಬಿದ್ದ ಮಳೆ ಹರಿದು ಇಂಗುವ ಜಾಗ, ಏಡನ್ ನಗರದಿಂದ 18 ಮೈಲಿಗಳ ದೂರದಲ್ಲಿತ್ತು. ಅಲ್ಲಿ ನೀರಿನ ಆಶ್ರಯ ಇರುವುದನ್ನು ಗುರುತಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಅವರ ಈ ಕೊಡುಗೆಯನ್ನು ಏಡನ್ ನಗರ ಇಂದೂ ನೆನಪಿಟ್ಟುಕೊಂಡಿದೆ. ವಿಶ್ವೇಶ್ವರಯ್ಯನವರ ಈ ಅನುಪಮ ಸೇವೆಗೆ ಬ್ರಿಟಿಷ್ ಸರ್ಕಾರ ಅವರಿಗೆ ಕೈಸರ್ ಎ-ಹಿಂದ್ ಬಿರುದು ನೀಡಿ ಗೌರವಿಸಿದೆ.

 

 ಗೌರವಗಳು

 ವಿಶ್ವೇಶ್ವರಯ್ಯ ಮೈಸೂರಿನ ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರ ಅವರಿಗೆ ‘ಸರ್’ ಪದವಿ ನೀಡಿ ಗೌರವಿಸಿತು. 1955ರಲ್ಲಿ ಕೇಂದ್ರ ಸರ್ಕಾರ ದೇಶದ ಅತ್ಯುಚ್ಚ ಗೌರವ ‘ಭಾರತರತ್ನ’ ನೀಡಿ ಗೌರವಿಸಿತು. ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ತಮ್ಮ ಉನ್ನತ ಸಾರ್ವಜನಿಕ ಸಾಧನೆಗಾಗಿ 1915ರಲ್ಲಿ ಬ್ರಿಟನ್ ಸರ್ಕಾರದ ದೊರೆ ಜಾರ್ಜ್ ವಿ ಅವರಿಂದ ನೈಟ್ ಹುಡ್ ಪದವಿ ಪಡೆದು ‘ಸರ್’ ಎಂದು ಅಭಿನಾಮಗೊಂಡರು.

 

                                                                                                                                        -ಆದಿ ಕೋಡಿಕೆರೆ

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!