ವಿಜಯ ಯುವ ಸಂಗಮ ಎಕ್ಕಾರು ತಂಡದಿಂದ ಬಡ ಕುಟುಂಬಕ್ಕೆ ಸೂರು
ಮೋದಿ ಜನುಮ ದಿನದಂದು, ಅಶಕ್ತ ಕುಟುಂಬಕ್ಕೆ ಮನೆ ಕೊಡುಗೆ

ಬಡ ಕುಟುಂಬಕ್ಕೆ ಎಕ್ಕಾರು ವಿಜಯ ಯುವ ಸಂಗಮದಿಂದ ಮನೆ ಕೊಡುಗೆ

 ಬಜ್ಪೆ: ವಿಜಯ ಯುವ ಸಂಗಮ ಎಕ್ಕಾರು ವತಿಯಿಂದ ಬಡಗ ಎಕ್ಕಾರು ಗ್ರಾಮದ ಗಿರಿಜಾ -ತುಕಾರಾಮ ಎಂಬುವವರ ಕುಟುಂಬಕ್ಕೆ  ನಿರ್ಮಿಸಿದ ಮನೆ ನಾಳೆ (ಸೆ.17) ಹಸ್ತಾಂತರಿಸಲಾಗುವುದು.

 ಸೆ.17 ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾಗಿದ್ದು, ಆ ದಿನದಂದೇ ಹೊಸ ಮನೆಯನ್ನು ಬಡ ಕುಟುಂಬಕ್ಕೆ ಹಸ್ತಾಂತರಿಸಲು ವಿಜಯ ಯುವ ಸಂಗಮದ ಸದಸ್ಯರು ನಿರ್ಧರಿಸಿದ್ದಾರೆ. ಎಕ್ಕಾರಿನಲ್ಲಿ ತೀವ್ರ ಬಡತನದಲ್ಲಿರುವ ಅಂಗವಿಕಲ ತುಕಾರಾಮ -ಜಲಜಾ ದಂಪತಿ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು. ಈ ಮಧ್ಯೆ ಗುಡಿಸಲಿನಂತಿದ್ದ ಹಳೆಯ ಮನೆ ಯಾವ ಕ್ಷಣದಲ್ಲೂ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಮನೆಯ ಯಜಮಾನರ ಅಂಗವಿಕಲತೆಯಿಂದಾಗಿ ದುಡಿಯಲೂ ಕಷ್ಟವಾಗುತ್ತಿತ್ತು.

 ಈ ಮನೆಯ ಪರಿಸ್ಥಿತಿ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ವಿಜಯ ಯುವ ಸಂಗಮ ಎಕ್ಕಾರು ತಂಡದ ಸದಸ್ಯರು ಈ ಮನೆಯವರ ಕಣ್ಣೀರು ಒರೆಸುವ ನಿರ್ಧಾರ ಕೈಗೊಂಡಿದ್ದರು. ಕುಸಿದು ಬೀಳುವ ಹಂತದಲ್ಲಿದ್ದ ಮನೆಯನ್ನು ಕೆಡವಿ ಹೊಸತೊಂದು ಮನೆ ನಿರ್ಮಿಸಿಕೊಡುವ ನಿರ್ಧಾರಕ್ಕೆ ಮುಂದಾದರು. ಈ ಬಗ್ಗೆ ದಕ್ಷ ವಾಹಿನಿಗೆ ಮಾಹಿತಿ ನೀಡಿದ ಯುವ ಸಂಗಮದ ಸದಸ್ಯ ಸುರೇಶ್ ಶೆಟ್ಟಿ ಹಾಗೂ ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಬಡವರ ಕಣ್ಣೀರು ಒರೆಸುವ ಕೆಲಸದ ಬಗ್ಗೆ ಸದಸ್ಯರ ಕನಸು ಇತ್ತು. ಸಂಘದ 25ನೇ ವರ್ಷದ ಸಂಭ್ರಮಾಚರಣೆಯ ವೇಳೆ ಏನಾದರೂ ಸಮಾಜಮುಖಿ ಕೆಲಸ ಮಾಡಬೇಕೆಂಬ ತುಡಿತವಿತ್ತು. ಆ ಸಂದರ್ಭ ಒಂದು ಮನೆ ಮಾಡಿಕೊಟ್ಟಿದ್ದೇವೆ. ಇದು ಮೂರನೇ ಮನೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸಂದರ್ಭ ಮನೆಯವರಿಗೆ ಹಸ್ತಾಂತರಿಸಲಿದ್ದೇವೆ ಎಂದು ತಿಳಿಸಿದರು.

 

 ವಿಜಯ ಯುವ ಸಂಗಮದ ಮೂರನೇ ಕೊಡುಗೆ

 ಸಂಘದ 25ನೇ ವರ್ಷಾಚರಣೆಯ ಸಂದರ್ಭ ಸಮಾಜಕ್ಕೇನಾದರೂ ಕೊಡಬೇಕೆಂಬ ಬಗ್ಗೆ ಸದಸ್ಯರಲ್ಲಿ ಚರ್ಚೆ ನಡೆಯುತ್ತಿತ್ತು. ಆಗ ನಮ್ಮ ಕಣ್ಣ ಮುಂದೆ ಬಂದಿದ್ದು ಬಡವರಿಗೆ ಮನೆ ಕಟ್ಟುವ ಯೋಜನೆ. ಕಳೆದ ವರ್ಷ ಶ್ಯಾಮ್‌ಪ್ರಸಾದ್ ಮುಖರ್ಜಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಸಂದರ್ಭ ಎರಡು ಮನೆಗಳನ್ನು ಫಲಾನುಭವಿಗಳಿಗೆ ಸಂಘಟನೆ ಹಸ್ತಾಂತರಿಸಿದೆ. ಈ ಬಾರಿ ಪ್ರಧಾನಿ ಮೋದಿಯವರಿಗೆ ಜನ್ಮದಿನದ ಗಿಫ್ಟ್ ಆಗಿ ಈ ಮನೆ ಕೊಡುಗೆ ನೀಡುತ್ತಿದ್ದೇವೆ ಎಂದು ಮಾಜಿ ಅಧ್ಯಕ್ಷರೂ ಆಗಿರುವ ಸುರೇಶ್ ಶೆಟ್ಟಿ ದಕ್ಷ ವಾಹಿನಿಗೆ ತಿಳಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!