ವಿಶ್ವ ಹಿಂದು ಪರಿಷತ್‌ನಿಂದ ಗೋವಿಗಾಗಿ ಹೊರೆಕಾಣಿಕೆ...!
ವಿಶ್ವ ಹಿಂದು ಪರಿಷತ್‌ನಿಂದ ಗೋವಿಗಾಗಿ ಹೊರೆಕಾಣಿಕೆ...

ಮಂಗಳೂರು: ಕುತ್ತಾರಿನಲ್ಲಿರುವ ಗೋವನಿತಾಶ್ರಯ ಟ್ರಸ್ಟ್‌ನಲ್ಲಿರುವ ಗೋವುಗಳ ಪಾಲನೆಗಾಗಿ ನವೆಂಬರ್ 6ರಂದು ವಿಶ್ವ ಹಿಂದು ಪರಿಷತ್‌ನಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.

 22 ವರ್ಷಗಳಿಂದ ಗೋವುಗಳ ಸಂರಕ್ಷಣೆ ಹಾಗೂ ಅಶಕ್ತ ಮಹಿಳೆಯರ ಪುನರ್ವಸತಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋವನಿತಾಶ್ರಯ ಟ್ರಸ್ಟ್‌ಗೆ ನ.6ರಂದು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಹೊರೆಕಾಣಿಕೆ ಮೆರವಣಿಗೆ ಆರಂಭವಾಗಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಹೊರೆಕಾಣಿಕೆ ಸಂಗ್ರಹಿಸಿ ಮಧ್ಯಾಹ್ನ 2 ಗಂಟೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಹೊರಡಲಿದೆ. ಡಾ.ಎ.ಜೆ.ಶೆಟ್ಟಿ, ಡಾ.ಎಂ.ಎನ್ ರಾಜೇಂದ್ರ ಕುಮಾರ್, ವೇದಮೂರ್ತಿ ವಿಠಲದಾಸ ತಂತ್ರಿ ಹಾಗೂ ಮಂಗಳೂರು ಉಪಮೇಯರ್ ಪೂರ್ಣಿಮಾ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.  ಕದ್ರಿಯಿಂದ ಹೊರಡಲಿರುವ ಮೆರವಣಿಗೆ ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು, ಕುತ್ತಾರ್, ದೇರಳಕಟ್ಟೆ, ಅಸೈಗೋಳಿ ತಲುಪಿದ ಬಳಿಕ ಉಳ್ಳಾಲ ಭಾಗದಿಂದ ಬರಲಿರುವ ಹೊರೆಕಾಣಿಕೆ ಗ್ರಾಮಚಾವಡಿ ಮೂಲಕ ಆಗಮಿಸಿ ಎರಡೂ ಸೇರಿಸಿ ಪಜೀರು ಗೋವನಿತಾಶ್ರಯಕ್ಕೆ  ಬರಲಿದೆ ಎಂದು ಜಗದೀಶ ಶೇಣವ ಮತ್ತು ಪುಂಡಲೀಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

 ಈ ಮಧ್ಯೆ ಪಜೀರಿನ ಗೋಶಾಲೆಯಲ್ಲಿ ಮಧ್ಯಾಹ್ನ 1.30ರಿಂದ ಮುದ್ದು ಕರುಗಳ ಮಧ್ಯೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಸಂಜೆ 4.30ಕ್ಕೆ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಗೋಭಕ್ತರ ಸಂಗಮ, 5.30ಕ್ಕೆ ಸಾರ್ವಜನಿಕ ಗೋಪೂಜೆ ನಡೆಯಲಿದ್ದು, 6 ಗಂಟೆಯಿಂದ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಪ್ರಜ್ವಲಿಸುವರು. ಸಚಿವ ಸುನೀಲ್ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

 400ಕ್ಕೂ ಅಧಿಕ ಹಸುಗಳ ಸಾಕಣೆ

 ಗೋವನಿತಾಶ್ರಯದಲ್ಲಿ 400ಕ್ಕೂ ಅಧಿಕ ದನ ಕರುಗಳನ್ನು ಸಾಕಲಾಗುತ್ತಿದೆ. ಇವುಗಳಿಗೆ ಪ್ರತಿ ತಿಂಗಳೂ ಸುಮಾರು 8 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗುತ್ತಿದ್ದು, ಈಗಿನ ದಿನಗಳಲ್ಲಿ ತುಂಬ ಕಠಿಣ. ಆದ್ದರಿಂದ ಸಮಾಜದ ಬಂಧುಗಳು, ಗೋ ಪ್ರೇಮಿಗಳು ಗೋವಿನ ಸಾಕಣೆಯಲ್ಲಿ ಪಾಲು ಪಡೆಯಲು ಅವಕಾಶ ನೀಡಲಾಗಿದೆ. ಒಂದು ಗೋವಿನ ದತ್ತು (ಒಂದು ಹಸುವಿನ ವಾರ್ಷಿಕ ವೆಚ್ಚ) 15,000 ರೂ, ಒಂದು ದಿನದ ಎಲ್ಲಾ ಗೋವುಗಳ ಗೋಗ್ರಾಸ 10,000 ರೂ., ಅರ್ಧದಿನದ ಗೋಗ್ರಾಸ 5000 ರೂ., ಒಂದು ದಿನದ ವತ್ಸಗ್ರಾಸ (ಕರುಗಳಿಗೆ) 2000 ರೂ., ಒಂದು ಗೋಣಿ ಹಿಂಡಿ 1000 ರೂ. ನೀಡಿ ಸಹಕರಿಸಲು ವಿಶ್ವ ಹಿಂದು ಪರಿಷತ್ ಮನವಿ ಮಾಡಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!