ಪಾಕ್ ಆಕ್ರಮಿತ ಕಾಶ್ಮೀರ ಭಾರತದ ವಶಕ್ಕೆ... ?
ಸುಳಿವು ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್...

ಶ್ರೀನಗರ: ಗಿಲ್ಗಿಟ್ -ಬಾಲ್ಟಿಸ್ತಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಸುಳಿವು ನೀಡಿದ್ದಾರೆ.

 ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ 76ನೇ ಪದಾತಿದಳದ ಆಚರಣೆ ಅಂಗವಾಗಿ ಆಯೋಜಿಸಿದ್ದ ‘ಶೌರ್ಯ ದಿವಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರ ಮತ್ತು ಲಡಾಕ್ 2019ರ ಆಗಸ್ಟ್ 5ರ ನಂತರ ಅಭಿವೃದ್ಧಿಯ ಹೊಸ ಹಾದಿಯಲ್ಲಿದೆ. ಇದು ಆರಂಭ. 1949ರ ಫೆಬ್ರವರಿ 22ರಂದು ಭಾರತದ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯವನ್ನು ನಾವು ಕಾರ್ಯಗತಗೊಳಿಸಿದಾಗ ಮಾತ್ರ 2019ರ ಆಗಸ್ಟ್ 5ರಂದು ಪ್ರಾರಂಭವಾದ ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣದ ಧ್ಯೇಯ ಪೂರ್ಣಗೊಳ್ಳಲಿದೆ. ಆದಿ ಶಂಕರಾಚಾರ್ಯ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕನಸು ನನಸಾಗುತ್ತದೆ ಎಂದು ಹೇಳಿದರು. 

1947ರ ನಿರಾಶ್ರಿತರಿಗೆ ಅವರ ಮನೆ ಮತ್ತು ಭೂಮಿ ವಾಪಸ್ ಕೊಡಿಸಿದಾಗ ಮಾತ್ರ ನ್ಯಾಯ ದೊರಕಿದಂತಾಗುತ್ತದೆ. ಆ ದಿನ ಕೂಡ ದೂರವಿಲ್ಲ ಎಂದು ಹೇಳಿದರು.

 ಪಾಕ್‌ನಿಂದ ದೌರ್ಜನ್ಯ

 ಪಾಕ್ ಆಕ್ರಮಿತ ನಿವಾಸಿಗಳ ಮೇಲೆ ಪಾಕಿಸ್ತಾನ ದೌರ್ಜನ್ಯ ಎಸಗುತ್ತಿದೆ. ಅವರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಮಾನವ ಹಕ್ಕುಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪಾಕಿಸ್ತಾನ ಪಿಒಕೆ ಜನರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಅರಿವು ನಮಗಿದೆ. ದ್ವೇಷದ ಬೀಜಗಳನ್ನು ಬಿತ್ತುತ್ತಿರುವ ಪಾಕಿಸ್ತಾನ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು.

 ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಗುಂಪುಗಳ ಪಾತ್ರವನ್ನು ಪ್ರಶ್ನಿಸಿದ ರಕ್ಷಣಾ ಸಚಿವರು, ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆದಾಗ ಇವು ಎಲ್ಲಿದ್ದವು? ಈ ಗುಂಪುಗಳು ಹಾಗೂ ತಮ್ಮನ್ನು ತಾವು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವವರು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

 ಪದಾತಿದಳ ದಿನ ಆಚರಣೆ

 ಭಾರತೀಯ ಸೇನೆಯು ಗುರುವಾರ ‘ಯುದ್ಧದ ರಾಣಿ’ ಎಂದು ಕರೆಯಲಾಗುವ ಪದಾತಿದಳದ 76ನೇ ವಾರ್ಷಿಕೋತ್ಸವ ಆಚರಿಸಿತು. ಇದರ ಅಂಗವಾಗಿ, ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು. 1947 ಅಕ್ಟೋಬರ್ 27ರಂದು ಸಿಖ್ ರೆಜಿಮೆಂಟ್‌ನ 1ನೇ ಬೆಟಾಲಿಯನ್ ನೇತೃತ್ವದ ಭಾರತೀಯ ಸೇನೆಯ ಪದಾತಿದಳದ ಸೈನಿಕರು ಪಾಕ್ ಆಕ್ರಮಣದಿಂದ ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸಲು ಬದ್ಗಾಮ್ ಏರ್‌ಫೀಲ್ಡ್‌ನಲ್ಲಿ ಬಂದಿಳಿದರು. ಇದು ಸ್ವತಂತ್ರ ಭಾರತದ ಮೊದಲ ಸೇನಾ ಕಾರ್ಯಾಚರಣೆ. ಈ ಸಂದರ್ಭವನ್ನು ಸ್ಮರಿಸಲು ಅ.27ನ್ನು ಪದಾತಿದಳದ ದಿನವನ್ನಾಗಿ ಆಚರಿಸಲಾಗುತ್ತದೆ.

 

 ಭಾರತಕ್ಕೆ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ ಭಯೋತ್ಪಾದಕ ಕೊಲ್ಲಲು ಬಂದಾಗ ಆತ ಹಿಂದೂ ಮತ್ತು ಮುಸ್ಲಿಂ ಎಂದು ನೋಡುವುದಿಲ್ಲ. ಅವನು ಮನುಷ್ಯ ಮತ್ತು ಭಾರತೀಯನನ್ನು ಕೊಲ್ಲುತ್ತಾನೆ ಎಂದು ರಾಜನಾಥ್ ಸಿಂಗ್ ಮಾರ್ಮಿಕವಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5, 2019ರಂದು 370ನೇ ವಿಧಿಯ ವಿಶೇಷ ನಿಬಂಧನೆಗಳನ್ನು ರದ್ದುಗೊಳಿಸಿ, 70 ವರ್ಷಗಳಿಗೂ ಹೆಚ್ಚು ಕಾಲದ ಕನಸನ್ನು ನನಸು ಮಾಡಿದರು ಎಂದು ರಕ್ಷಣಾ ಸಚಿವರು ಹೇಳಿದರು. ನಾಯಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪ್ರೇಮ್‌ನಾಥ್ ಡೋಗ್ರಾ ಅವರ ಕನಸುಗಳ ಸಾಕಾರದ ದಿನ ಆಗಸ್ಟ್ 5 ಆಗಿತ್ತು. ಈ ಪ್ರಾಂತ್ಯದಲ್ಲಿ ವಿಶೇಷ ಸ್ಥಾನಮಾನದ ಲಾಭ ಒತ್ತಟ್ಟಿಗಿರಲಿ, ಜನರಿಗೆ ಮೂಲಭೂತ ಹಕ್ಕುಗಳನ್ನು ಸಹ ನಿರಾಕರಿಸಲಾಗಿತ್ತು(ಆಗಸ್ಟ್ 5 2019ಕ್ಕಿಂತ ಮೊದಲು) ಎಂದು ಹೇಳಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!