ಮಂಗಳೂರಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕಾಸರಗೋಡಿನ ನಾಲ್ವರು ಅರೆಸ್ಟ್
ಮಂಗಳೂರಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಕಾಸರಗೋಡಿನ ನಾಲ್ವರು ಅರೆಸ್ಟ್

ಮಂಗಳೂರು: ಡ್ರಗ್‌ ಮಾಫಿಯಾದ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ‘‘ಡ್ರಗ್ಸ್ ಫ್ರಿ ಮಂಗಳೂರು’’ ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗಿದೆ. ನಾಲ್ವರನ್ನು ಬಂಧಿಸಿದ ಪೊಲೀಸರು 200 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುತ್ತಾರೆ.

ಮಂಗಳೂರು ನಗರದ ಉತ್ತರ ಠಾಣಾ ವ್ಯಾಪ್ತಿಯ ಫಳ್ನೀರ್ ಪರಿಸರದಲ್ಲಿ ಕಾರಿನಲ್ಲಿ ಮೂವರು ವ್ಯಕ್ತಿಗಳು ಸೇರಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ಅವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಾದಕ ವಸ್ತುವನ್ನು ಸಹಿತ ಇತರ ಸೊತ್ತುಗಳೊಂದಿಗೆ ನಾಲ್ವರನ್ನು ಬಂಧಿಸಲಾಗಿದೆ. ಇವರು ಬೆಂಗಳೂರಿನಿಂದ ಎಂಡಿಎಂ ಮಾದಕ ವಸ್ತುವನ್ನು ಖರೀದಿಸಿಕೊಂಡು ಬಂದಿದ್ದರು ಎನ್ನಲಾಗಿದೆ. 

ಬಂಧಿತರನ್ನು ಕಾಸರಗೋಡು ಜಿಲ್ಲೆಯ ಉದ್ಯಾವರ ನಿವಾಸಿ ಮೊಹಮ್ಮದ್ ಹನೀಫ್ ಎ.ಎನ್(47), ಸೈಯದ್ ಫೌಜಾನ್(30), ಕುಂಜತ್ತೂರು ನಿವಾಸಿ ಸಿರಾಜುದ್ದೀನ್ ಅಬೂಬಕ್ಕರ್(35) ಎನ್ನಲಾಗಿದೆ. ಬಂಧಿತರಿಂದ 100 ಗ್ರಾಂ ತೂಕದ ರೂ. 5,00,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, ನಗದು ರೂ. 4000, ಕಾರು-1, ಮೊಬೈಲ್ ಫೋನುಗಳು-3, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 10,94,500 ರೂ. ಆಗಬಹುದು. ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಂಗಳೂರು ನಗರದ ಅಳಪೆ ಗ್ರಾಮದ ಕಂಕನಾಡಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನು ಅಕ್ರಮವಾಗಿ ಮಾದಕ ವಸ್ತು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಿಷೇದಿತ ಮಾದಕ ವಸ್ತುವನ್ನು ಹೊಂದಿದ್ದ ಮಂಜೇಶ್ವರ ಮಿಯಾಪದವಿನ ಇಬ್ರಾಹಿಂ ಅರ್ಷಾದ್‌ ವಿಕೆ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 100 ಗ್ರಾಂ ತೂಕದ ರೂ. 5,00,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, ನಗದು ರೂ. 1000, ಮೊಬೈಲ್ ಫೋನುಗಳು-1, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿ ಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 5,11,500 ಆಗಬಹುದು. ಆರೋಪಿಯ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!