ಮಂಗಳೂರು: ಊರಿಗೆ ಮಾರಕವಾದ ಅಣಬೆ ಫ್ಯಾಕ್ಟರಿ - ಬಾಲಕನಿಗೆ ಶ್ವಾಸಕೋಶ ಸಮಸ್ಯೆ.!
ಕಾಂಗ್ರೆಸ್ ಮುಖಂಡನ ಅಣಬೆ ಫ್ಯಾಕ್ಟರಿ ಅವಾಂತರ: ಉಸಿರಾಟ ಸಮಸ್ಯೆಯಿಂದ ಬಾಲಕ ಆಸ್ಪತ್ರೆಗೆ

ಮಂಗಳೂರು: ಇದು ಊರಿಗೆ ಸಮಸ್ಯೆಯಾಗಿರುವ ಫ್ಯಾಕ್ಟರಿಯ ಕಥೆ/ವ್ಯಥೆ.! ಹಲವು ತಿಂಗಳುಗಳಿAದ ಜನರಿಗೆ ಮಾರಕವಾಗಿದ್ದು, ಇಡೀ ಊರಿಗೆ ಊರೇ ಉಸಿರಾಟದ ಸಮಸ್ಯೆಗೆ ತುತ್ತಾಗಿದೆ. ಕಾಂಗ್ರೆಸ್ ಮುಖಂಡನ ಈ ಫ್ಯಾಕ್ಟರಿಯ ಕಾರಣಕ್ಕೆ ಕೆಲವರು ಆಸ್ಪತ್ರೆ ಸೇರಿದ್ದು, ಬಾಲಕನೊಬ್ಬನ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆದಿದೆ. 

ಮಂಗಳೂರಿನ ವಾಮಂಜೂರು ಬಳಿಯ ವೈಟ್ ಗ್ರೋ ಅಗ್ರಿ ಅಣಬೆ ತಯಾರಿ ಘಟಕವೇ ಜನರ ನೆಮ್ಮದಿ ಕಸಿದುಕೊಂಡ ಫ್ಯಾಕ್ಟರಿ. ಈ ಫ್ಯಾಕ್ಟರಿ ಬರುವ ಮುಂಚೆ ಜನರು ನೆಮ್ಮದಿಯಿಮದ ಜೀವನ ನಡೆಸುತ್ತಿದ್ದರು. ಆದರೆ ಚಾಕಲೇಟ್ ಫ್ಯಾಕ್ಟರಿ ಅಂತ ಹೇಳಿಕೊಂಡು ಆರಂಭವಾದ ಫ್ಯಾಕ್ಟರಿ ಸದ್ಯ ಆ ಊರಿನ ಜನರ ನೆಮ್ಮದಿಯನ್ನೇ ಕೆಡಿಸಿ ಬಿಟ್ಟಿದೆ. 

ಚಾಕಲೇಟ್ ಅಂತ ಹೇಳಿ ಅಣಬೆ ತಯಾರಿಕಾ ಘಟಕ ಸ್ಥಾಪಿಸಿ ಮಂಗಳೂರು ಹೊರ ವಲಯದ ವಾಮಂಜೂರಿನ ಜನರಿಗೆ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಹತ್ತಾರು ಹೋರಾಟಗಳು ನಡೆದರೂ ದ.ಕ ಜಿಲ್ಲಾಡಳಿತವಾಗಲೀ ಪರಿಸರ ಇಲಾಖೆಯಾಗಲೀ ಆ ಫ್ಯಾಕ್ಟರಿ ಮುಚ್ಚುವ ಕೆಲಸ ಮಾಡಿಲ್ಲ. ಪರಿಣಾಮ ಇಂದು ಅಲ್ಲಿನ ಸಮಸ್ಯೆ ತಾರಕಕ್ಕೇರಿದ್ದು, ಕಾಂಗ್ರೆಸ್ ಮುಖಂಡನ ಅಣಬೆ ಫ್ಯಾಕ್ಟರಿ ದುರ್ವಾಸನೆಗೆ ಬಾಲಕನೊಬ್ಬ ಆಸ್ಪತ್ರೆ ಸೇರಿದ್ದಾನೆ. ಉಸಿರಾಟ ಮತ್ತು ಶ್ವಾಸಕೋಶ ಸಮಸ್ಯೆಯಿಂದ ವಾಮಂಜೂರಿನ 12 ವರ್ಷದ ಶ್ರೇಯನ್ ಪ್ರಿನ್ಸ್ ಲೋಬೋ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳೂರು ಹೊರವಲಯದ ವಾಮಂಜೂರು ಬಳಿಯ ವೈಟ್ ಗ್ರೋ ಅಗ್ರಿ ಅಣಬೆ ತಯಾರಿ ಘಟಕ, ಮಂಗಳೂರು ದಕ್ಷಿಣದ ಮಾಜಿ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋಗೆ ಸೇರಿದ್ದಾಗಿದೆ. ಸದ್ಯ ಈ ಬಾಲಕನಿಗೆ ಶ್ವಾಸಕೋಶದ ಸೋಂಕು ತಗುಲಿ ಸದ್ಯ ನ್ಯುಮೋನಿಯಾ ಆತಂಕ ಎದುರಾಗಿದ್ದು, ಅಣಬೆ ಫ್ಯಾಕ್ಟರಿ ವಿಷಾನಿಲ ಸೋರಿಕೆಯಿಂದ ಹಲವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಾಜಿ ಶಾಸಕನ ಅಣಬೆ ಫ್ಯಾಕ್ಟರಿ ದುರ್ವಾಸನೆಗೆ ವಾಮಂಜೂರು ನಾಗರಿಕರು ತತ್ತರಿಸಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಹಲವು ದಿನಗಳಿಂದ ಅಣಬೆ ಫ್ಯಾಕ್ಟರಿಯಿಂದ ದುರ್ವಾಸನೆ ಬರ್ತಾ ಇದ್ದು, ಫ್ಯಾಕ್ಟರಿ ಬಂದ್ ಮಾಡಲು ಹಲವು ಭಾರೀ ನಾಗರಿಕರು ಹೋರಾಟ ಮಾಡಿದ್ದಾರೆ. 

ಅಣಬೆ ಫ್ಯಾಕ್ಟರಿ ದುರ್ವಾಸನೆ ಮಿಶ್ರಿತ ವಿಷ ಗಾಳಿಯಿಂದ ಆರೋಗ್ಯ ಸಮಸ್ಯೆ ಎದುರಾಗಿದೆ. ಅಣಬೆ ಬೆಳೆಯಲು ಅಣಬೆ ಫ್ಯಾಕ್ಟರಿಯಲ್ಲಿ ಕಾಂಪೋಸ್ಟ್ ಘಟಕವಿದ್ದು, ಅದಕ್ಕೆ ಬಳಸೋ ಕೆಮಿಕಲ್ ಕಾರಣಕ್ಕೆ ಇಡೀ ಊರಿನಲ್ಲಿ ಕೆಟ್ಟ ವಾಸನೆ ಹರಡಿದೆ. ಈ ಹಿಂದೆ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಫ್ಯಾಕ್ಟರಿ ಮುಚ್ಚಲು  ಜಿಲ್ಲಾಧಿಕಾರಿ ಆದೇಶಿಸಿದ್ದರೂ ಬಳಿಕ ಮತ್ತೆ ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿ ವಿಷಾನಿಲ ಸೋರಿಕೆ ಪರಿಶೀಲನೆಗೆ ಆದೇಶವಾಗಿತ್ತು. ಈ ಸಮಿತಿ ದುರ್ವಾಸನೆ ತಡೆಯಲು ಫ್ಯಾಕ್ಟರಿ ಕ್ರಮ ಕೈಗೊಂಡಿದೆ ಎಂದು ವರದಿ ನೀಡಿತ್ತು. ಹೀಗಾಗಿ ಮತ್ತೆ ಫ್ಯಾಕ್ಟರಿ ಆರಂಭವಾಗಿದ್ದು, ಇದೀಗ ಮತ್ತೆ ನಿರಂತರ ದುರ್ವಾಸನೆ ಬರುತ್ತಿದೆ ಎನ್ನಲಾಗಿದೆ.

ಹೀಗಾಗಿ ಸಾರ್ವಜನಿಕರ ದೂರಿನ ಹಿನ್ನೆಲೆ ಪ್ರಾಯೋಗಿಕ ಪರೀಕ್ಷೆಗೆ ಡಿಸಿ ಸೂಚಿಸಿದ್ದರು. ಆದರೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್ ಮಾಜಿ ಶಾಸಕನ ಪರ ಜಿಲ್ಲಾಡಳಿತ ನಿಂತಿರೋ ಆರೋಪವಿದ್ದು, ಅನಾಹುತಕ್ಕೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ನೇರ ಹೊಣೆ ಎಂದು ನಾಗರಿಕರು ಎಚ್ಚರಿಸಿದ್ದಾರೆ. ಒಟ್ಟಾರೆ ಕಾಂಗ್ರೇಸ್ ನಾಯಕನ ಈ ಫ್ಯಾಕ್ಟರಿಗೆ ಜನವಸತಿ ಪ್ರದೇಶದಲ್ಲಿ ಅನುಮತಿ ಕೊಟ್ಟಿರೋ ಬಗ್ಗೆಯೇ ಆಕ್ಷೇಪಗಳಿವೆ. ಸದ್ಯ ಹಲವರಿಗೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿರೋ ಕಾರಣದಿಂದ ಜಿಲ್ಲಾಡಳಿತ ತಕ್ಷಣ ಕ್ರಮ ಜರಗಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!