ಮಂಗಳೂರು: ಶರಣ್ ಪಂಪ್‌ವೆಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು; ಹೈಕೋರ್ಟ್ ತಡೆಯಾಜ್ಞೆ..! ಸೆಕ್ಷನ್ ಹಾಕಿದ್ದ ಕುರಿತು ಸ್ಪಷ್ಟನೆ ನೀಡುವಂತೆ ಪೊಲೀಸರಿಗೆ ನೋಟೀಸ್
ಮಂಗಳೂರು: ಶರಣ್ ಪಂಪ್‌ವೆಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು; ಹೈಕೋರ್ಟ್ ತಡೆಯಾಜ್ಞೆ..! ಸೆಕ್ಷನ್ ಹಾಕಿದ್ದ ಕುರಿತು ಸ್ಪಷ್ಟನೆ ನೀಡುವಂತೆ ಪೊಲೀಸರಿಗೆ ನೋಟೀಸ್

ಮಂಗಳೂರು: ನಗರದ ಮಂಗಳಾದೇವಿ ನವರಾತ್ರಿ ಉತ್ಸವದ ಸಂದರ್ಭ ಮತೀಯ ಸೌಹಾರ್ದಕ್ಕೆ ಧಕ್ಕೆ ತರುವ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿರುವುದಾಗಿ ವರದಿಯಾಗಿದೆ. 

ಅ.16ರಂದು ಮಂಗಳಾದೇವಿ ದೇವಸ್ಥಾನದ ಬಳಿಯ ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್‌ವೆಲ್ ಮತ್ತಿತರರು ಕೇಸರಿ ಧ್ವಜ ಕಟ್ಟಿ ಹಿಂದೂಗಳ ಅಂಗಡಿಗಳಲ್ಲೇ ವ್ಯಾಪಾರ ನಡೆಸುವಂತೆ ಕರೆ ನೀಡಿದ್ದರು. 

ಇದರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ಗೆ ಮನವಿ ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಆ ಬಳಿಕ ಶರಣ್ ಪಂಪ್‌ವೆಲ್ ಮತ್ತಿತರರ ವಿರುದ್ಧ ಪಾಂಡೇಶ್ವರ ಠಾಣೆ ಎಸ್‌ಐ ಮನೋಹರ್ ನೀಡಿದ ದೂರಿನಂತೆ ಸ್ವಯಂಪ್ರೇರಿತ ಕೇಸು ದಾಖಲಾಗಿತ್ತು. ಸೆಕ್ಷನ್ 153 ಎ ಅಡಿಯಲ್ಲಿ ಜನ, ವರ್ಗ, ಸಮುದಾಯಗಳ ನಡುವೆ ದ್ವೇಷ ಹಬ್ಬಿಸಿದ್ದಾರೆಂದು ಆರೋಪಿಸಿ ಜಾಮೀನು ರಹಿತ ಕೇಸು ದಾಖಲಿಸಿದ್ದರು. ಈ ಸೆಕ್ಷನ್ ಪ್ರಕಾರ ಆರೋಪಿಗಳನ್ನು ಯಾವುದೇ ಸಂದರ್ಭದಲ್ಲಿ ಅರೆಸ್ಟ್ ಮಾಡುವುದಕ್ಕೆ ಅವಕಾಶ ಇರುತ್ತದೆ.

ಕೇಸು ದಾಖಲಾದ ಕೂಡಲೇ ಬೆಂಗಳೂರಿನಲ್ಲಿ ವಕೀಲರಾಗಿರುವ ಅರುಣ್ ಶ್ಯಾಮ್ ಹೈಕೋರ್ಟಿನಲ್ಲಿ ಅಪೀಲು ಮಾಡಿದ್ದಾರೆ. ಅ.19ರಂದು ಬೆಳಗ್ಗೆ ಹೈಕೋರ್ಟಿನಲ್ಲಿ ಪಿಟಿಶನ್ ಫೈಲ್ ಆಗಿದ್ದು ಸಂಜೆಯ ವೇಳೆಗೆ ನ್ಯಾಯಮೂರ್ತಿ ಟಿಜಿ ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ಪೀಠ, ಪೊಲೀಸರು ಹಾಕಿದ್ದ ಎಫ್‌ಐಆರ್ ಗೆ ತಡೆ ವಿಧಿಸಿದೆ.

ಅಲ್ಲದೆ, 153ಎ ಸೆಕ್ಷನ್ ಅಡಿ ಕೇಸು ದಾಖಲಿಸಬೇಕಾದ ಅನಿವಾರ್ಯತೆ ಬಗ್ಗೆ ಪೊಲೀಸ್ ಅಧಿಕಾರಿಗಳೇ ಬಂದು ಸ್ಪಷ್ಟನೆ ನೀಡುವಂತೆ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ. ರಾಜಕೀಯ ಪ್ರೇರಿತವಾಗಿ ಮತ್ತು ಶರಣ್ ಪಂಪ್ಪೆಲ್ ಅವರ ಘನತೆ ಕುಂದಿಸುವ ಉದ್ದೇಶದಿಂದ ಈ ಕೇಸು ದಾಖಲಿಸಲಾಗಿದೆ. ಅವರು ಯಾವುದೇ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿಲ್ಲ. ಹೇಳಿಕೆ ಕೊಟ್ಟು ಎರಡು ದಿನ ಕಳೆದಿದ್ದರೂ, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜಾಮೀನು ರಹಿತ ಕೇಸು ದಾಖಲಿಸಿ ಮನೋ ಸೈರ್ಯ ಕುಂದಿಸುವ ಯತ್ನ ಮಾಡಿದ್ದಾರೆ. ಈ ರೀತಿ ಎಫ್‌ಐಆರ್ ದಾಖಲಿಸುವ ಅಗತ್ಯ ಇರಲಿಲ್ಲ. ಹೀಗಾಗಿ ಈ ಕುರಿತ ಎಫ್‌ಐಆರ್ ವಿಧಿಸಿರುವುದಕ್ಕೆ ತಾತ್ಕಾಲಿಕ ತಡೆ ನೀಡುವಂತೆ ಕೇಳಿಕೊಂಡಿದ್ದರು. 

ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಹೈಕೋರ್ಟಿಗೆ ಹಾಜರಾಗಿ ಸ್ಪಷ್ಟ ವಿವರಣೆ ನೀಡದೇ ಇದ್ದರೆ, ಎಫ್‌ಐಆರ್ ರದ್ದಾಗುವ ಸಾಧ್ಯತೆ ಹೆಚ್ಚಿದೆ ಎಂದು ಅರುಣ್ ಶ್ಯಾಮ್ ಕರಾವಳಿಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!