ಬಂಟ್ವಾಳ: ಮನೆಗೆ ನುಗ್ಗಿದ ಅಂತರಾಜ್ಯ ಕಳ್ಳನನ್ನು ಹಿಡಿದ ಗ್ರಾಮಸ್ಥರು.!
ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಕನ್ನ- ಓರ್ವ ಪೊಲೀಸ್‌ ವಶ

ಬಂಟ್ವಾಳ: ಮನೆಗೆ ನುಗ್ಗಿ ಕಳವು ಮಾಡಿದ ಅಂತರಾಜ್ಯ ಕಳ್ಳರ ಪೈಕಿ ಓರ್ವ ಕಳ್ಳನನ್ನು ಸಾರ್ವಜನಿಕರು ‌ಹಿಡಿದು ಥಳಿಸಿದಲ್ಲದೆ, ಪೋಲೀಸರ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದೆ.

ಕೇರಳ ಮೂಲದ ಕೊಲ್ಲಂ ಜಿಲ್ಲೆಯ ಕರಕ್ಕಲ್ ನಿವಾಸಿ ಪ್ರವೀಣ್ ಎಂಬಾತ ಪೋಲೀಸರ ಅತಿಥಿಯಾಗಿದ್ದಾನೆ.ಈತನ ಸ್ನೇಹಿತ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಬಳಸುವ ಬೈಕ್ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ಕಳವು ನಡೆಸಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಂಚಿ ಮಸೀದಿ ಬಳಿಯ ಕಮರುದ್ದೀನ್ ಹಾಗೂ ಜಲಾಲುದ್ದೀನ್ ಸಹೋದರರ ಎರಡು ಮನೆ ಹಾಗೂ ಕಾಡಂಗಡಿ ಎಂಬಲ್ಲಿ ಹಮೀದ್ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ.

ಅತೀ ಶ್ರೀಮಂತ ಮನೆಯಾಗಿದ್ದು, ಅತ್ಯಂತ ಭದ್ರತೆಯಿಂದ ಕೂಡಿದ ಮನೆಗಳಾಗಿವೆ.ಅದರಲ್ಲಿ ಒಂದು ಮನೆ ಇತ್ತೀಚೆಗಷ್ಟೇ ಗೃಹಪ್ರವೇಶವಾಗಿತ್ತು ಎಂದು ಹೇಳಲಾಗಿದೆ. ಮಂಚಿ ಮಸೀದಿ ಬಳಿ ಯಿರುವ ಸಹೋದರರಾದ ಕಮಾರುದ್ದೀನ್ ಹಾಗೂ ಜಲಾಲುದ್ದೀನ್ ಅವರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಕಪಾಟುಗಳನ್ನು ಒಡೆದು ಜಾಲಡಿದ್ದಾರೆ. ಆದರೆ ಯಾವುದೇ ಬೆಲೆಬಾಳುವ ವಸ್ತುಗಳು ಕೈಗೆ ಸಿಗದ ಹಿನ್ನೆಲೆಯಲ್ಲಿ ಅಲ್ಲಿಂದ ವಾಪಾಸು ಆಗಿದ್ದಾರೆ. ಅಲ್ಲೇ ಸ್ವಲ್ಪ ದೂರದಲ್ಲಿ ಕಾಡಂಗಡಿ ಎಂಬಲ್ಲಿರುವ ಹಮೀದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನ ಒಳಗೆ ಇದ್ದ ಸುಮಾರು 3 ಸಾವಿರ ರೂ.ನಗದು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ.

ಬೈಕಿನಲ್ಲಿ ಬಂದ ಕಳ್ಳರಿಬ್ಬರು ಯಾರು ಇಲ್ಲದ ಮನೆಯನ್ನು ಆಯ್ದುಕೊಂಡು ಕಳ್ಳತನ ಮಾಡುವು ಬಗ್ಗೆ ಸಾರ್ವಜನಿಕರು ಹಿಡಿದು ಥಳಿಸುವ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಶನಿವಾರ ರಾತ್ರಿ ಈ ಮೂರು ಮನೆಯಲ್ಲಿ ಯಾರು ಇರಲಿಲ್ಲ. ಈ ಮೂರು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದರು.ಹಾಗಾಗಿ ಮನೆಯ ಲೈಟ್ ಆಫ್ ಆಗಿತ್ತು. ಲೈಟ್ ಉರಿಯದ ಮನೆಗಳನ್ನು ನೋಡಿಕೊಂಡು ಅಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಮನೆಗೆ ನುಗ್ಗುವುದು ಇವರ ಕಾಯಕವಂತೆ. ನಿನ್ನೆ ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಒಂದು ಕಡೆ ಜೋರಾಗಿ ಮಳೆ,ಇನ್ನೊಂದು ಕಡೆ ಸಿಡಿಲು ಈ ನಡುವೆ ಇವರಿಬ್ಬರು ಕಳ್ಳರು ಲೈಟ್ ಉರಿಯದ ಮಸೀದಿ ಬಳಿ ಇರುವ ಸಹೋದರರ ಎರಡು ಮನೆಗಳಿಗೆ ನುಗ್ಗಿದ್ದಾರೆ‌.ಅಲ್ಲಿ ಜಾಲಾಡಿ ಏನು ಸಿಗದ ಬಳಿಕ ಕಾಡಂಗಡಿಯ ಹಮೀದ್ ಅವರ ಮನೆಗೆ ನುಗ್ಗಿ ಕಪಾಟಿನಲ್ಲಿರಿಸಿದ್ದ ಮೂರು ಸಾವಿರ ಹಣವನ್ನು ಕದ್ದು ಹೋಗುವ ವೇಳೆ ಹಮೀದ್ ಅವರ ಸಂಬಂಧಿಕರ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ. ಸಿಡಿಲು ಮಳೆಯ ಹಿನ್ನೆಲೆಯಲ್ಲಿ ಮನೆಯ ಇನ್ ವರ್ಟ್ ರ್ ನ್ನು ಆಫ್ ಮಾಡಿ ಬಿಡುವಂತೆ ಹಮೀದ್ ಅವರು ಸಮೀಪದ ಸಂಬಂಧಿಕರೋರ್ವರಲ್ಲಿ ತಿಳಿಸಿದ್ದಾರೆ.

ಇನ್ ವರ್ಟ್ ರ್ ಆಫ್ ಮಾಡಲು ಬಂದಿರುವ ವ್ಯಕ್ತಿಗೆ ಮನೆಯ ಕಡೆಯಿಂದ ಇಬ್ಬರು ವ್ಯಕ್ತಿಗಳು ಓಡಿ ಹೋಗುವ ದೃಶ್ಯ ಕಂಡು ಬಂದಿದೆ. ಕೂಡಲೇ ಅವರು ಸ್ನೇಹಿತರಿಗೆ ತಿಳಿಸಿ ಹುಡುಕುವ ಪ್ರಯತ್ನ ಮಾಡಿದ್ದಾರೆ. ಬೈಕಿನಲ್ಲಿ ಬಂದ ಕಳ್ಳರು ಇವರನ್ನು ನೋಡಿ ಓಡುವ ಭರದಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರು ಬೇರೆ ಬೇರೆ ದಿಕ್ಕಿನಲ್ಲಿ ಪರಾರಿಯಾಗಲು ಯತ್ನಿಸಿ ಓರ್ವ ಮಾತ್ರ ಕೊನೆಗೂ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಒಂದು ಕಡೆ ಮಳೆ ಇನ್ನೊಂದು ಕಡೆ ಕತ್ತಲು ಆದರೂ ಕಳ್ಳತನದ ಬಗ್ಗೆ ಕೋಪಗೊಂಡಿದ್ದ ಗ್ರಾಮಸ್ಥರು ಜೊತೆಯಾಗಿ ಕಳ್ಳರ ಜಾಡು ಹಿಡಿದು ಹುಡುಕಿದ್ದಾರೆ.

ರಾತ್ರಿ ಸುಮಾರು 8 ಗಂಟೆಗೆ ಹುಡುಕುವ ಪ್ರಯತ್ನ ಮಾಡಿದ ಗ್ರಾಮಸ್ಥರಿಗೆ ಮುಂಜಾವಿನ ವೇಳೆ ಓರ್ವ ಕಳ್ಳನ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇನ್ನೊರ್ವ ಕಳ್ಳ ಇವರ ಕೈ ಗೆ ಸಿಗದೆ ಪರಾರಿಯಾಗಿದ್ದಾನೆ‌. ಕೈ ಗೆ ಸಿಕ್ಕಿದ ಕಳ್ಳನಿಗೆ ಸಾರ್ವಜನಿಕರು ಸರಿಯಾಗಿ ಗೂಸ ನೀಡಿದ್ದಾರೆ. ಬಳಿಕ ಕಳ್ಳತನದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅ ಬಳಿಕ ಪೋಲೀಸರಿಗೊಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌ ಶ್ವಾನದಳ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಪರಾರಿಯಾಗಿರುವ ಇನ್ನೋರ್ವ ಆರೋಪಿಗಾಗಿ‌ ಶೋಧ ಕಾರ್ಯು ಮುಂದುವರಿಸಿದ್ದಾರೆ. ಪೋಲೀಸ್ ‌ವಶದಲ್ಲಿರುವ ಆರೋಪಿಯ ತನಿಖೆಯ ಬಳಿಕ ಇನ್ನಷ್ಟು ಮಾಹಿತಿ ಲಭ್ಯವಾಗಬಹುದು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!