ಮಂಗಳೂರು ಸಹಿತ ಏಳು ವಿಮಾನ ನಿಲ್ದಾಣಗಳಿಗೆ  ಬಾಂಬ್ ಬೆದರಿಕೆ.!!
ದೇಶದ ಏಳು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಇ ಮೇಲ್ ಸಂದೇಶ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಿತ ದೇಶದ ಏಳು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಇ ಮೇಲ್ ಸಂದೇಶ ಬಂದಿದ್ದು, ಈ ಕುರಿತಂತೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬುಧವಾರ ಮಧ್ಯಾಹ್ನದ ವೇಳೆ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಸಂದೇಶ ದೊರಕಿದೆ. ಈ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅದರಂತೆ ಬಜ್ಪೆ ಪೊಲೀಸರು, ಉನ್ನತ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ತಂಡ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಪಾಸಣೆಯ ಬಳಿಕ ಇದೊಂದು ಹುಸಿ ಬೆದರಿಕೆಯ ಇ ಮೇಲ್ ಎಂದು ನಿರ್ಧರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. 

ಇ ಮೇಲ್ ಸಂದೇಶ - "ನಿಮ್ಮ ಒಂದು ವಿಮಾನದ ಒಳಗೆ ಸ್ಫೋಟಕ ಇದೆ. ಏರ್ಪೋರ್ಟ್ ಒಳಗೂ ಇದೆ. ಅವುಗಳನ್ನು ಅಡಗಿಸಿಡಲ್ಲಾಗಿದ್ದು ಕೆಲ ಗಂಟೆಗಳಲ್ಲಿ ಸ್ಪೋಟಗೊಳ್ಳಲಿದೆ. ನಾನು ನಿಮ್ಮೆಲ್ಲರನ್ನೂ ಕೊಲ್ಲುವೆ. ನಾವು 'funnig' ಎಂಬ ಭಯೋತ್ಪಾದಕ ಗುಂಪಿನವರು".

ಮುಂಬೈ, ಅಹ್ಮದಾಬಾದ್, ಲಕ್ನೊ, ಜೈಪುರ, ಗುವಾಹಟಿ, ತಿರುವನಂತಪುರಂನ ವಿಮಾನ ನಿಲ್ದಾಣಗಳಿಗೆ ಇ ಮೇಲ್ ಬೆದರಿಕೆ ಕರೆ ಬಂದಿರುವುದಾಗಿ ತಿಳಿದು ಬಂದಿದೆ. ‘ಅದಾನಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಮಂಗಳೂರು ವಿಮಾನ ನಿಲ್ದಾಣ ಸೇರಿ ಏಳು ವಿಮಾನ ನಿಲ್ದಾಣಗಳಿಗೆ ಬಾಂಬ್ ಇರುವ ಬಗ್ಗೆ ಇ ಮೇಲ್ ಸಂದೇಶ ಬಂದಿತ್ತು. ಇ ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಅದರಂತೆ ತಪಾಸಣೆ ಮಾಡಲಾಗಿದ್ದು, ಏನೂ ಪತ್ತೆಯಾಗಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ. 26ರ ರಾತ್ರಿ 12.59 ನಿಮಿಷಕ್ಕೆ ಇಮೇಲ್ ಬಂದಿದ್ದು , 27ರ ಬೆಳಗ್ಗೆ 11.20ಕ್ಕೆ ಗಮನಿಸಲಾಗಿದೆ. ನಮಗೆ ಮಾಹಿತಿ ದೊರಕಿದ ಕೂಡಲೇ ಏರ್ಪೋರ್ಟ್ ಕಟ್ಟಡದ ಹೊರಗೆ ಭದ್ರತೆಯನ್ನು ಬಿಗಿಪಡಿಸಿದ್ದು, ಹೆಚ್ಚುವರಿ ಚೆಕ್ ಪೋಸ್ಟ್ ಹಾಕಿ ತಪಾಸಣೆ ನಡೆಸಲಾಯಿತು. ಏರ್ಪೋರ್ಟ್ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ, ಸೂಕ್ತ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!