ಹಳೆಯಂಗಡಿಯಲ್ಲಿ ಬಹು ದೊಡ್ಡ ಮರಳು ಮಾಫಿಯಾ.!
ಯಾವ ಅಧಿಕಾರಿಗಳಿಗೂ, ಯಾವ ರೂಲ್ಸ್ ಗೂ ಭಯವಿಲ್ಲ - ಎಗ್ಗಿಲ್ಲದೆ ನಡೆಯುವ ಅಕ್ರಮ

ಹಳೆಯಂಗಡಿ : ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಗೆ 100 ಮೀಟರ್ ಅಂತರದಲ್ಲಿ ಯಾವ ಇಲಾಖೆಗೂ ಲೆಕ್ಕಿಸದೆ ರಾಜಾರೋಷವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ಮಾಧ್ಯಮದ ವರದಿ ಬಳಿಕ ಅಧಿಕಾರಿಗಳು ದಾಳಿ ನಡೆಸಿದರು, ಪಂಚಾಯತ್ ನಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು ಮತ್ತೆ ಅಕ್ರಮ ಆರಾಮವಾಗಿ ನಡೆಯುತ್ತಾ ಇದೆ.

ನಿನ್ನೆ ರಾತ್ರಿಯಷ್ಟೇ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆಆದರೆ ಇಲ್ಲೊಂದು ಅಚ್ಚರಿಯ ಸಂಗತಿಯಿದೆ. ಅಧಿಕಾರಿಗಳು ದಾಳಿ ನಡೆಸಿ ಹಿಂತಿರುಗಿದ ಎರಡು ನಿಮಿಷಗಳಲ್ಲೇ ಮತ್ತೆ ಮರಳೆತ್ತುವ ಕಾರ್ಯ ಶುರುಮಾಡಿದ್ದಾರೆ. ಇಂದು ಕೂಡ ಖದೀಮರ ಕೆಲಸ ಮುಂದುವರಿದಿದೆ.

ಕತ್ತಲಾಗುತ್ತಿದ್ದಂತೆ 5-6 ನಾಡ ದೋಣಿಗಳು ನೀರಿಗಿಳಿದು ಮರಳು ಹೊತ್ತು ಟಿಪ್ಪರ್ ಗೆ ಲೋಡ್ ಮಾಡಲು ಖದೀಮರ ತಂಡ ತಯಾರಾಗುತ್ತದೆ. ಸಂಜೆಯಿಂದ ಮುಂಜಾನೆವರೆಗೂ ನದಿ ಒಡಲಿನಿಂದ ಮರಳೆತ್ತಿ ನಿರ್ಭೀತಿಯಿಂದ ಸಾಗಾಟ ಮಾಡುತ್ತಾರೆ. ಯಾವುದೇ ಅಂಜಿಕೆ ಅಳುಕಿಲ್ಲದೆ ಸ್ಯಾಂಡ್ ಮಾಫಿಯಾ ಮುಂದುವರಿಸಲು ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂಬುವುದು ಸ್ಪಷ್ಟವಾಗಿದೆ. 

ಸರಕಾರ ಮರಳು ಅಕ್ರಮ ಸಾಗಣೆ ತಡೆಗಟ್ಟಲು ಹೊಸ ಕಾಯಿದೆ ಜಾರಿಗೆ ತಂದರೂ ಕಟ್ಟುನಿಟ್ಟಿನ ಅನುಷ್ಠಾನದಲ್ಲಿ ಅಧಿಕಾರಿಗಳ ಅಪ್ರಮಾಣಿಕತೆ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ. ಎಲ್ಲೆಂದರಲ್ಲಿ ಅಕ್ರಮ ಮರಳು ಸಂಗ್ರಹ, ಸಾಗಿಸುವುದು ಮಿತಿ ಮೀರಿದೆ. ಹೊಸ ಮರಳು ನೀತಿಯಿಂದ ಮರಳು ಅಕ್ರಮ ಸಾಗಣೆಗೆ ಕಡಿವಾಣ ಬೀಳುತ್ತದೆ ಎಂದು ಭಾವಿಸಿದ ಪರಿಸರ ಪ್ರೇಮಿಗಳಿಗೆ ಭ್ರಮನಿರಸವಾಗಿದೆ. ಅದರಲ್ಲೂ ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಭೂ ಒಡಲಿಗೆ ಕನ್ನ ಹಾಕುವ ಖದೀಮರು ನದಿಗಳ ಒಡಲನ್ನು ಬರಿದಾಗಿಸುತ್ತಿದ್ದಾರೆ. 

ಈ ಹಳೆಯಂಗಡಿ ಮರಳುಗಾರಿಕೆಯ ರೂವಾರಿ ಸುರತ್ಕಲ್ ಮೂಲದ ಪ್ರಭಾವಿ ವ್ಯಕ್ತಿ ಎಂದು ಕೇಳಿ ಬಂದಿದೆ. ಸಂಜೆಯಿಂದ ರಾತ್ರಿಯೆಲ್ಲಾ ಮನಬಂದಂತೆ ನದಿ ಒಡಲು ಬಗೆಯುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಹಾಗೂ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಕ್ರಮಕ್ಕೆ ಮುಂದಾಗಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಾಲೂಕು ಆಡಳಿತ ಪಿ.ಡಿ.ಓ. ಅಧಿಕಾರಿ ಮೌನವಹಿಸಿದ್ದಾರೆ.

ಪಂಚಾಯತ್ ಅಧಿಕಾರಿಗಳು ದೂರು ನೀಡಿ ನೋಟಿಸ್ ಜಾರಿಮಾಡಿದ್ದು,  ಬಳಿಕವೂ ಅಕ್ರಮ ನಡೆಯುತ್ತಿದೆ ಎಂದರೆ ಇದರ ಹಿಂದೆ ದೊಡ್ಡ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗಿದೆ. ಇದರ ಹಿಂದೆ ಇರುವ ದೊಡ್ಡ ವ್ಯಕ್ತಿ ಯಾರೆಂದು ಸಾಬೀತಾಗಬೇಕಿದೆ. 

ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದ್ದು, ನೈಸರ್ಗಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ. ಅಕ್ರಮ ದಂಧೆಕೋರರ ಅಟ್ಟಹಾಸಕ್ಕೆ ಸಂಬಂಧ ಪಟ್ಟ ಇಲಾಖೆ ಜಾಣ ಮೌನವಹಿಸಿದೆ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!