ಮಂಗಳೂರು: ಹೋಳಿ ಆಯೋಜಕರಿಗೆ ಎಚ್ಚರಿಕೆ ನೀಡಿದ ಪುನೀತ್ ಅತ್ತಾವರ.!
"ಹೋಳಿ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲ್ಲ"
ಬಜರಂಗದಳ ವಿಭಾಗ ಸಂಯೋಜ ಪುನೀತ್ ಅತ್ತಾವರ ಎಚ್ಚರಿಕೆ

ಹೋಳಿ ಹಬ್ಬದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲಾರದು ಎಂದು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ  ಎಚ್ಚರಿಕೆ ನೀಡಿದ್ದಾರೆ. ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆ. ಅದಕ್ಕೆ ಅದರದ್ದೇ ಆದ ಧಾರ್ಮಿಕ ಹಿನ್ನೆಲೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಹೋಳಿ ಹೆಸರಿನಲ್ಲಿ ಗಾಂಜಾ, ಡ್ರಗ್ಸ್,‌ ಅಫೀಮು ಪೂರೈಸಲಾಗುತ್ತಿದೆ. ಹೋಳಿ ಕಾರ್ಯಕ್ರಮ ಎಂದು ಹೇಳಿಕೊಂಡು ಆಚರಿಸಿ ಅದರಲ್ಲಿ ಮಾದಕದ್ರವ್ಯದ ಚಟುವಟಿಕೆ ನಡೆಯುತ್ತದೆ. ಯುವ ಸಮುದಾಯವನ್ನ ತಪ್ಪು ಹಾದಿಗೆಳೆಯುವ ಕೃತ್ಯ ಎಸಗಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಬಜರಂಗದಳ ಮನವಿ ಮಾಡಿದೆ. ಅದನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದರೆ ನೇರ ಪರಿಣಾಮವನ್ನು ಸಂಘಟಕರೇ ಅನುಭವಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಬಾರಿ ಮರೋಳಿಯಲ್ಲಿ ಹೋಳಿ ಕಾರ್ಯಕ್ರಮ ಆಯೋಜಿಸಿದ್ದರ ಪರಿಣಾಮ ಏನಾಗಿತ್ತು ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಇಂತಹ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು. ಇಲ್ಲವಾದರೆ ನೇರವಾಗಿ ಎದುರಿಸಲು ಬಜರಂಗದಳ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್​ನಿಂದ ಪೊಲೀಸರಿಗೆ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಡಿಜೆ ಪಾರ್ಟಿ ಆಯೋಜಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಸಹ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಅಂಥ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಮನವಿ ಮಾಡಿದೆ.

‘ಹಿಂದೂ ಧರ್ಮದಲ್ಲಿ ಹೋಳಿ ಹಬ್ಬವನ್ನು ವಿಶ್ವದಾದ್ಯಂತ ಹಿಂದೂಗಳು ವಿಶೇಷವಾಗಿ ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಭಗವಂತ ಶ್ರೀಕೃಷ್ಣ ಬಾಲ್ಯದಲ್ಲಿ ಲೋಕ ಕಂಟಕಿಯಾದ ಹೋಲಿಕಾ ಎಂಬ ರಾಕ್ಷಸಿಯನ್ನು ಸಂಹಾರ ಮಾಡಿ ಲೋಕಕಲ್ಯಾಣ ಮಾಡಿದ ಪವಿತ್ರ ದಿನ. ತಾರಕಾಸುರನ ವಧೆಗೆ ಶಿವ ಪರಮಾತ್ಮನನ್ನು ಎಚ್ಚರಗೊಳಿಸಲು ಮನ್ಮಥ ದಹನವಾದ ಪ್ರತೀಕವಾಗಿ ಕಾಮದಹನವನ್ನು ಮಾಡುವ ಪದ್ಧತಿಯಿದೆ. ಹಾಗಾಗಿ ಹಿಂದೂ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಮಾದಕ ದ್ರವ್ಯ ಸೇವಿಸಿ, ಡಿಜೆ ಪಾರ್ಟಿ ಆಯೋಜಿಸಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಇಂತಹ ಡಿಜೆ ಪಾರ್ಟಿಗಳಲ್ಲಿ ಮಾದಕ ದ್ರವ್ಯದ ಜೊತೆಗೆ ಡ್ರಗ್ಸ್ ಉಪಯೋಗಿಸುತ್ತಿರುವ ಬಗ್ಗೆ, ಸಂಶಯವಿದ್ದು, ಇಂತಹ ಡಿಜೆ ಪಾರ್ಟಿಗಳು ಯುವಕ ಯುವತಿಯರನ್ನು ದಾರಿತಪ್ಪಿಸುವಂತಹದ್ದಾಗಿದೆ. ಸಾಮಾಜಿಕ ಸ್ಯಾಸ್ಥ್ಯ ಕೆಡಿಸುವಂತಹದ್ದು ಅಲ್ಲದೆ ಕೋಮುಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಇದು ಕೋಮು ಸಂಘರ್ಷಕ್ಕೆ ಕಾರಣವಾಗಬಹುದು. ಹಾಗಾಗಿ ಇಂತಹ ಯಾವುದೇ ಡಿಜೆ ಪಾರ್ಟಿಗಳಿಗೆ ಅನುಮತಿ ನೀಡಬಾರದಾಗಿ ವಿನಂತಿ’ ಎಂದು ವಿಶ್ವ ಹಿಂದೂ ಪರಿಷತ್ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!