ಪೊಲೀಸರಿಗೇ ಮೇಲ್‌ ಕಳಿಸಿ ಐಸಿಸ್‌ ಸೇರಲು ಹೊರಟಿದ್ದ ಯುವಕ ಅರೆಸ್ಟ್.!!
ಐಸಿಸ್‌ ಸೇರಲಿದ್ದ ಐಐಟಿ ವಿದ್ಯಾರ್ಥಿ ತೌಸೀಫ್‌ ಅಲಿ ಬಂಧನ

ಕುಖ್ಯಾತ ಭಯೋತ್ಪಾದ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಫಾರ್‌ ಇರಾಕ್‌ ಮತ್ತು ಸಿರಿಯಾ(ಐಸಿಸ್‌) ಸೇರುವುದಾಗಿ ತಿಳಿಸಿದ್ದ ಗುವಾಹಟಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಗುವಾಹಟಿ) ವಿದ್ಯಾರ್ಥಿಯೊಬ್ಬನನ್ನು ಗುವಾಹಟಿ ಸಮೀಪದ ಹಾಜೋ ಪ್ರದೇಶದಲ್ಲಿ ಶನಿವಾರ ಸಂಜೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಐಸಿಸ್‌ನ ಭಾರತ ಘಟಕದ ಮುಖ್ಯಸ್ಥ ಹ್ಯಾರಿಸ್‌ ಅಜ್ಮಲ್‌ ಫಾರೂಖಿ ಬಂಧನದ ನಾಲ್ಕೇ ದಿನಗಳಲ್ಲಿ ವಿದ್ಯಾರ್ಥಿಯೊಬ್ಬ ಐಸಿಸ್‌ ಉಗ್ರ ಸಂಘಟನೆಗೆ ಸೇರುವುದಾಗಿ ಘೋಷಣೆ ಮಾಡಿರುವುದು ಮಹತ್ವವೆನಿಸಿದೆ. ಪೊಲೀಸರಿಗೆ ಐಸಿಸ್‌ ಸೇರುವುದಾಗಿ ಮೇಲ್‌ ಕಳಿಸಿರುವ ವಿದ್ಯಾರ್ಥಿ ತೌಸೀಫ್‌ ಅಲಿ ಫಾರೂಖಿ ಐಐಟಿ ಗುವಾಹಟಿಯಲ್ಲಿ ನಾಲ್ಕನೇ ವರ್ಷದ ಬಯೋಟೆಕ್ನಾಲಜಿ ಸ್ನಾತಕ ಪದವಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಜೊತೆಗೆ ಈತ ದೆಹಲಿಯ ಓಖ್ಲಾ ಮೂಲದವನು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ..

ಈ ಕುರಿತು ವಿದ್ಯಾರ್ಥಿಯೇ ಖುದ್ದು ಪೊಲೀಸರಿಗೆ ಮೇಲ್‌ ಕಳಿಸಿ ತಾನು ಐಸಿಸ್‌ ಉಗ್ರ ಸಂಘಟನೆ ಸೇರುವುದಾಗಿ ತಿಳಿಸಿದ್ದ. ಬಳಿಕ ಪೊಲೀಸರು ಆತ ವ್ಯಾಸಂಗ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿದಾಗ ಶನಿವಾರ ಮಧ್ಯಾಹ್ನದಿಂದ ಆತ ನಾಪತ್ತೆಯಾಗಿರುವುದಾಗಿ ತಿಳಿದುಬಂದಿತ್ತು. ಇದೇ ಸಮಯದಲ್ಲಿ ಆತನ ಮೊಬೈಲ್‌ ಸಂಪರ್ಕ ಕೂಡ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನ ಕೊಠಡಿಗೆ ತೆರಳಿ ಪರಿಶೀಲಿಸಿದಾಗ ಅಲ್ಲಿ ಐಸಿಸ್‌ ಬಾವುಟ ಹೋಲುವ ಕಪ್ಪು ಬಾವುಟ ಪತ್ತೆಯಾಗಿದೆ. ನಂತರ ಸ್ಥಳೀಯರ ಸಹಕಾರದೊಂದಿಗೆ ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಾಜೋ ಎಂಬ ಪ್ರದೇಶದಲ್ಲಿ ಶನಿವಾರ ಸಂಜೆ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನ ವಿಚಾರಣೆಗೆಂದು ವಶಕ್ಕೆ ಪಡೆಯಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!