ಸೌಜನ್ಯಾ ಪ್ರಕರಣ: ಸಮಾಜದ ಪರವಾಗಿ ಕ್ಷಮೆಯಾಚನೆ.!
ಸಂತೋಷ್ ರಾವ್ ಮನೆಗೆ ಒಡನಾಡಿ ಸಂಸ್ಥೆ, ಮಹೇಶ್ ತಿಮರೋಡಿ ಭೇಟಿ

ಕಾರ್ಕಳ: ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವ ಕಾರ್ಕಳ ತಾಲ್ಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಬುಧವಾರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಂತೋಷ್ ರಾವ್ ಅವರ ತಂದೆ ನಿವೃತ್ತ ಶಿಕ್ಷಕರಾದ ಸುಧಾಕರ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುಧಾಕರ ಅವರಿಗೆ ತಲೆಗೂದಲು ಕ್ಷೌರ ಮಾಡಿಸಿ, ಹೊಸಬಟ್ಟೆ ತೊಡಿಸಿ ಪಾದಪೂಜೆ ಮಾಡಲಾಯಿತು. ಮನೆಗೆ ಸುಣ್ಣಬಣ್ಣ ಬಳಿಯಲಾಯಿತು.

ಬಳಿಕ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ‘ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಂತೋಷ್‌ ರಾವ್ ಕುಟುಂಬ ಮಾನಸಿಕವಾಗಿ– ದೈಹಿಕವಾಗಿ ಬಹಳ ನೊಂದಿದೆ. ಕೊಲೆಗಾರ, ಅತ್ಯಾಚಾರಿ ಎಂಬ ಕಳಂಕದ ಕಾರಣಕ್ಕೆ ಸಂಬಂಧಗಳನ್ನು ಕಳೆದುಕೊಂಡಿದೆ. ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ಸಂತೋಷ್ ರಾವ್ ಕುಟುಂಬದ ಕ್ಷಮೆ ಕೇಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದರು.

ಸಂತೋಷ್‌ ರಾವ್ ಕುಟುಂಬಕ್ಕೆ ಹೊಸದಾಗಿ ಬದುಕು ಕಟ್ಟಿಕೊಡಬೇಕು. ನೈತಿಕವಾಗಿ ಕುಸಿದಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ಹಾಗೂ ಚೈತನ್ಯ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಒಡನಾಡಿ ಸಂಸ್ಥೆಯು ನೆರವು ನೀಡಲಿದೆ ಎಂದರು.

ಸೌಜನ್ಯಾ ಪ್ರಕರಣದಲ್ಲಿ ಮಾಡದ ತಪ್ಪಿಗೆ ಸಂತೋಷ್‌ರಾವ್ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸಂತೋಷ್‌ರಾವ್‌ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!