ಕಾಪು: ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡು ದಂಪತಿ ಜೀವಾಂತ್ಯ.!!
ಆತ್ಮಹತ್ಯೆಗೆ ಶರಣಾದ ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿ

ಕಾಪು : ಕಾಪುವಿನ ಹೆಸರಾಂತ ಸಮಾಜ ಸೇವಕ, ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ ಕೆ.ಲೀಲಾಧರ ಶೆಟ್ಟಿ(68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(58) ದಂಪತಿ ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. 

ಈ ದಂಪತಿ ಮಂಗಳವಾರ ಮಧ್ಯರಾತ್ರಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ದಂಪತಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

ಸಮಾಜ ಸೇವಕರಾಗಿದ್ದ ಲೀಲಾಧರ ಶೆಟ್ಟಿ ಸರಳ ಸಜ್ಜನ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಇವರು, ಮಜೂರು ಗ್ರಾಮ ಪಂಚಾಯತ್ ನಲ್ಲಿ ಒಂದು ಸಲ ಅಧ್ಯಕ್ಷರಾಗಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಅತ್ಯುತ್ತಮ ನಾಟಕ ತಂಡ ಹೊಂದಿದ್ದ ಇವರು ಕಾಪು ರಂಗತರಂಗ ತಂಡದ ಯಜಮಾನರಾಗಿ ಭಾರೀ ಜನಪ್ರಿಯತೆ ಪಡೆದಿದ್ದರು. ಅಶಕ್ತರ ನೆರವಿಗೆ ಧಾವಿಸುವ ಅವರು ಯಾವಾಗಲೂ ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಪ್ತರಾಗಿದ್ದ ಅವರು ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ, ಅತ್ಯುತ್ತಮ ನಟ ಮತ್ತು ನಿರ್ದೇಶಕ ಆಗಿದ್ದರು. ಕಾಪು ತಾಲೂಕು ರಚನೆಯಾಗಬೇಕು ಎಂದು ಹೋರಾಟ ಸಮಿತಿ ರಚಿಸಿ ಸಮಿತಿಯ ಅಧ್ಯಕ್ಷರಾಗಿ ಹೆಜನಾಡಿಯಿಂದ ಉದ್ಯಾವರದ ವರೆಗೆ ಪಾದಯಾತ್ರೆ ನಡೆಸಿದ್ದರು. ಇತ್ತೀಚೆಗೆ ತನ್ನ ಹೊಸ ನಾಟಕ ರಚನೆಯನ್ನು ಮಾಡಿದ್ದ ಇವರು ಅದರಲ್ಲಿ ಯಶಸ್ವಿಯಾಗುವ ಆಶಾಭಾವನೆ ಹೊಂದಿದ್ದರು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!